ಹುಬ್ಬಳ್ಳಿ: ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಅಸ್ಥಿರತೆ ಉಂಟಾಗಲಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ರಾಜಕೀಯದಲ್ಲಿ ಏನಾಗುತ್ತದೆ ಎಂದು ಯುಗಾದಿ ನಂತರ ಕಾದುನೋಡಿ ಎಂದು ಭವಿಷ್ಯ ನುಡಿದರು. ರಾಜ್ಯದಲ್ಲಿ ಬರಗಾಲದ ಛಾಯೆ ಬಗ್ಗೆ ಮಾತನಾಡಿ, ಮನುಷ್ಯ ಮಾಡಿದ ತಪ್ಪುಗಳಿಗೆ ದೇವರು ಕ್ಷಮಿಸುತ್ತಾನೆ. ಆದರೆ, ಮನುಷ್ಯ ಮಾಡಿದ ಪಾಪಕರ್ಮಗಳು ಮನುಷ್ಯನನ್ನ ಕ್ಷಮಿಸುವುದಿಲ್ಲ. ಮನುಷ್ಯನ ಪಾಪಕರ್ಮಗಳೇ ಇಂತಹ ಪರಿಸ್ಥಿತಿಗೆ ಕಾರಣ, ಮನುಷ್ಯನ ಕರ್ಮ ಭಾದೆಗಳು ಹೆಚ್ಚಾದಾಗ ಇಂತಹ ಪರಿಸ್ಥಿತಿಯನ್ನು ಸಾಮೂಹಿಕವಾಗಿ ಅನುಭವಿಸಬೇಕಾಗುತ್ತದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿ, ಅದು ಅವರವರ ವಿಚಾರ. ಅದರ ಬಗ್ಗೆ ಹೇಳಲು ಆಗುವುದಿಲ್ಲ. ದೇಶದ ಬಗ್ಗೆ ಈ ಹಿಂದೆಯೂ ಹೇಳಿದ್ದೆ, ದೊಡ್ಡ ದೊಡ್ಡ ನಗರಗಳಿಗೆ ಆಪತ್ತು ಕಾದಿದೆ ಎಂದರು. ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆ ಕುರಿತು ಮಾತನಾಡಿ, ಇದು ಅವರವರ ಧರ್ಮದವರ ಹೇಳಿಕೆ. ಅದು ಅವರನೋವಿನ ಸಂಗತಿ. ಎಲ್ಲಾ ಜನಾಂಗದಲ್ಲಿಯೂ ಅವರವರ ನೋವು ಇರುತ್ತೆ. ಅದನ್ನು ಈ ರೀತಿ ನೋವಿನ ಮೂಲಕ ಹೊರಹಾಕುತ್ತಾರೆ. ಧರ್ಮದ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸೂಕ್ತವಲ್ಲ ಎಂದು ಹೇಳಿದರು.
ಉದಯನಿಧಿ ಸ್ಟಾಲಿನ್ ಅವರು ಯಾವ ನೋವಿನಿಂದ ಹೇಳಿದ್ದಾರೋ ಗೊತ್ತಿಲ್ಲ. ಆಯಾ ಧರ್ಮದಲ್ಲಿರೋರು ತಮಗಾಗಿರೋ ನೋವಿನಿಂದಾಗಿ ಈ ರೀತಿ ಹೇಳಿಕೆ ನೀಡುತ್ತಾರೆ. ಜನರಲ್ಲಿ ಪೂರ್ಣವಾದ ಜ್ಞಾನದ ಕೊರತೆ ಇದೆ. ಪೂರ್ಣವಾದ ಅರಿವಿನ ಕೊರತೆಯಿಂದಾಗಿ ಈ ರೀತಿ ಧರ್ಮ, ರಾಜಕೀಯ ವಿಚಾರ ಮುನ್ನೆಲೆಗೆ ತರುತ್ತಾರೆ. ಧರ್ಮ ಎಂದರೆ ನೆಮ್ಮದಿ, ಶಾಂತಿ ನಿಜವಾದ ಜ್ಞಾನ ಮೂಡಿಸುತ್ತೆ ಎಂದರು.
ಸನಾತನ ಧರ್ಮವನ್ನು ಸಾಂಕ್ರಾಮಿಕ ರೋಗಕ್ಕೆ ಹೋಲಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಧರ್ಮದ ವಿಚಾರವಾಗಿ ಹೇಳಿಕೆ ನೀಡಿರುವವರು ಯಾಕೆ ನೊಂದಿದ್ದಾರೆ ಎಂದು ಅವರೇ ಹೇಳಬೇಕು. ರಾಜ್ಯ ರಾಜಕೀಯದಲ್ಲಿ ಸ್ವಪಕ್ಷದವರಿಂದಲೇ ಕಚ್ಚಾಟ ವಿಚಾರವಾಗಿ ಮಾತನಾಡಿ, ಮನುಷ್ಯನಿಗೆ ಅತೃಪ್ತಿ, ರಾಜಕೀಯದಲ್ಲಿ ಈ ರೀತಿ ಅಸಮಾಧಾನ ಸಹಜ ಎಂದರು. ಉಚಿತ ಭಾಗ್ಯಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂಬ ಹೇಳಿಕೆಗಳ ಬಗ್ಗೆ ಮಾತನಾಡಿ, ಆ ರೀತಿ ಏನೂ ಆಗಲ್ಲ, ರಾಜ್ಯ ಸಂಪದ್ಭರಿತವಾಗಿರುತ್ತೆ. ಜನಸಾಮಾನ್ಯರಿಗೆ ಸಾಕಷ್ಟು ಅನುಕೂಲಗಳಾಗಿವೆ. ಕೇಂದ್ರವು ಆರ್ಥಿಕವಾಗಿ ಸದೃಢವಾಗಿದೆ. ರಾಜ್ಯ ಮತ್ತು ಕೇಂದ್ರ ಆರ್ಥಿಕ ದಿವಾಳಿಯಾಗೋ ಪ್ರಶ್ನೆ ಬರಲ್ಲ ಎಂದು ಹೇಳಿದರು.
ಬಿಜೆಪಿ - ಜೆಡಿಎಸ್ ಮೈತ್ರಿ ಇನ್ನೂ ಫೈನಲ್ ಆಗಿಲ್ಲ - ಪ್ರಹ್ಲಾದ್ ಜೋಶಿ: ಮತ್ತೊಂದೆಡೆ, ಬಿಜೆಪಿ - ಜೆಡಿಎಸ್ ಮೈತ್ರಿ ಇನ್ನೂ ಫೈನಲ್ ಆಗಿಲ್ಲ. ಅದರ ಬಗ್ಗೆ ನನಗೆ ಸಂಪೂರ್ಣವಾದ ಮಾಹಿತಿ ಇಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೈತ್ರಿ ಅನಿವಾರ್ಯ ಎಂದು ಸ್ಥಳೀಯವಾಗಿ ಹೇಳಿರಬಹುದು. ನಾನು ಕೇಂದ್ರದಲ್ಲಿ ಮಂತ್ರಿಯಾಗಿ ಮೈತ್ರಿ ವಿಚಾರವಾಗಿ ನಮ್ಮ ಪಕ್ಷದ ವರಿಷ್ಠರು ಹೇಳುವವರೆಗೆ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಸಿಎಂ ವಿರುದ್ಧ ಹೇಳಿಕೆ ನೀಡುವುದು ಬಿ ಕೆ ಹರಿಪ್ರಸಾದ್ಗೇ ಡ್ಯಾಮೇಜ್: ದಿನೇಶ್ ಗುಂಡೂರಾವ್