ಧಾರವಾಡ: ಕಳೆದ ಕೆಲವು ದಿನಗಳಿಂದ ರೈತರು ಹಳಿಯಾಳದ ಪ್ಯಾರಿ ಸಕ್ಕರೆ ಕಾರ್ಖಾನೆಯ ವಿರುದ್ಧ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನಿನ್ನೆ ಮಧ್ಯಾಹ್ನ ರೈತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದರು.
ಕಬ್ಬು ಸಾಗಾಣಿಕೆ ಮತ್ತು ಕಟಾವು ದರವನ್ನು ಹೆಚ್ಚುವರಿಯಾಗಿ ಪಡೆಯುತ್ತಿರುವ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ. ಕಬ್ಬು ಆಯುಕ್ತರ ವರದಿ ಪಡೆದು ಕಾರ್ಖಾನೆಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ರೈತರಿಗೆ ಭರವಸೆ ನೀಡಿದರು.
ರೈತರ ಕಲ್ಯಾಣ ಹಾಗೂ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡಲು ರಾಜ್ಯ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಕಬ್ಬು ಆಯುಕ್ತರನ್ನು ಸರ್ಕಾರದ ಪ್ರತಿನಿಧಿಯಾಗಿ ಕಳುಹಿಸಿದ್ದು, ಅಗತ್ಯ ವರದಿ ಸಲ್ಲಿಸಲು ಧಾರವಾಡ ಮತ್ತು ಕಾರವಾರ ಜಿಲ್ಲೆಗೆ ಕಳುಹಿಸಲಾಗಿದೆ ಎಂದರು.
ನವೆಂಬರ್ 10 ರಂದು ಸಕ್ಕರೆ ಕಾರ್ಖಾನೆ ಮಾಲೀಕರ ಮತ್ತು ರೈತರೊಂದಿಗೆ ಸಭೆ ನಡೆಸಲಿದ್ದೇವೆ. ರೈತರ ಎಲ್ಲ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಕ್ರಮ ಕೈಗೊಳ್ಳಲಾಗುವುದು. ತಕ್ಷಣ ತಮ್ಮ ಧರಣಿ ಹಿಂಪಡೆಯಬೇಕು ಎಂದು ಇದೇ ವೇಳೆ ಮನವಿ ಮಾಡಿದರು.
ರೈತ ಮುಖಂಡ ಕುರುಬೂರು ಶಾಂತಕುಮಾರ ಸೇರಿದಂತೆ ವಿವಿಧ ಮುಖಂಡರು ರೈತರ ಬೇಡಿಕೆಗಳ ಕುರಿತು ಸಚಿವರೊಂದಿಗೆ ಅಭಿಪ್ರಾಯ ಹಂಚಿಕೊಂಡರು. ಮಹಾನಗರ ಪೊಲೀಸ್ ಆಯುಕ್ತ ಲಾಬೂರಾಮ, ಉಪ ಪೊಲೀಸ್ ಆಯುಕ್ತ ಸಾಹೀಲ್ ಬಾಗ್ಲಾ ಭಾಗವಹಿಸಿದ್ದರು.
ಇದನ್ನೂ ಓದಿ: ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹ: ಧಾರವಾಡ ಡಿಸಿ ಕಚೇರಿಗೆ ರೈತರ ಮುತ್ತಿಗೆ