ಧಾರವಾಡ: ಕಳೆದ ಸಾಲಿಗೆ ಹೋಲಿಸಿದರೆ ಧಾರವಾಡ ಜಿಲ್ಲೆಯಲ್ಲಿ 2020ನೇ ಸಾಲಿನಲ್ಲಿ ಕಡಿಮೆ ಪ್ರಮಾಣದಲ್ಲಿ ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿವೆ. ಸಾರಿಗೆ, ಪೊಲೀಸ್, ಲೊಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿದರೆ ರಸ್ತೆ ಅಪಘಾತಗಳನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಭವನದಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಇರುವ ರಾಷ್ಟ್ರೀಯ ಹೆದ್ದಾರಿ 4 ರಲ್ಲಿನ 30 ಕಿ.ಮೀ ರಸ್ತೆಯಲ್ಲಿ ಅಪಘಾತಗಳನ್ನು ತಪ್ಪಿಸಲು ಸಂಚಾರಿ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. 60 ಕಿಮೀ ವೇಗದ ಮಿತಿ ಇದ್ದರೂ ಬಸ್, ಟ್ರಕ್, ಮಿನಿಬಸ್, ಕಾರ್ ಮುಂತಾದ ವಾಹನಗಳ ಚಾಲಕರು ನಿಯಮ ಪಾಲಿಸದೇ ವೇಗವಾಗಿ ವಾಹನ ಚಾಲನೆ, ವಾಹನಗಳ ಓವರ್ ಟೇಕ್ ಮಾಡುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಅಪಘಾತ, ಸಾವು-ನೋವು ಆಗುತ್ತಿವೆ ಎಂದರು.
ರಸ್ತೆ ನಿರ್ವಹಿಸುತ್ತಿರುವ ಗುತ್ತಿಗೆದಾರರು, ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹುಬ್ಬಳ್ಳಿ-ಧಾರವಾಡ ಬೈಪಾಸ್‍ನ 30 ಕಿಮೀ ರಸ್ತೆ ಪರಿಶೀಲಿಸಿ ಮುಂದಿನ 72 ಗಂಟೆಗಳಲ್ಲಿ ಅಪಾಯಕಾರಿ ಸ್ಥಳ, ಸೇತುವೆ ತಿರುವು ಗುರುತಿಸಿ ಅಲ್ಲಿ ಕನಿಷ್ಠ 20 ಎಚ್ಚರಿಕೆ ಫಲಕ, ವೇಗದ ಮಿತಿ ಸೂಚಿಸುವ ಮತ್ತು ಸುರಕ್ಷತಾ ನಿಯಮಗಳ ಫಲಕಗಳನ್ನು ಅಳವಡಿಸಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಹುಬ್ಬಳ್ಳಿ-ಧಾರವಾಡದ 30 ಕಿಮೀ ಬೈಪಾಸ್ ರಸ್ತೆಯ ಮಧ್ಯದಲ್ಲಿ ರಬ್ಬರ್ ಮತ್ತು ಫೈಬರ್ ಸಾಧನ ಬಳಸಿ, ರಸ್ತೆ ವಿಭಜಕಗಳನ್ನು ನಿರ್ಮಿಸಬೇಕು. ರಸ್ತೆ ಅಗಲೀಕರಣ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅನುಮತಿ ಬಂದ ತಕ್ಷಣ ಈ ಕುರಿತು ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬೈಪಾಸ್ ರಸ್ತೆಯ ಫುಟ್‍ಪಾತ್ ಅತಿಕ್ರಮಿಸಿ ಅನೇಕ ರೀತಿಯ ಅಂಗಡಿ, ವ್ಯಾಪಾರಗಳು ಅನಧಿಕೃತವಾಗಿ ನಡೆಯುತ್ತಿವೆ. ಟೋಲ್ ಪಕ್ಕದಲ್ಲಿಯೇ ಗುತ್ತಿಗೆದಾರರಿಗೆ ನೀಡಿರುವ ಜಾಗದಲ್ಲಿ ನಿಯಮ ಉಲ್ಲಂಘಿಸಿ ಅಂಗಡಿ ನಿರ್ಮಾಣ, ವಾಹನ ನಿಲುಗಡೆಗೆ ಸ್ಥಳಾವಕಾಶ ನೀಡಲಾಗಿದೆ. ಈ ಕುರಿತು ರಸ್ತೆ ನಿರ್ವಾಹಕ ಗುತ್ತಿಗೆದಾರ ಸಂಸ್ಥೆಗೆ ನೋಟಿಸ್ ನೀಡಿ ಮತ್ತು ಸೂಕ್ತ ಬಂದೋಬಸ್ತ್ನಲ್ಲಿ ಎಲ್ಲ ಅತಿಕ್ರಮಣಗಳನ್ನು ಶೀಘ್ರದಲ್ಲಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದರು.
ಇತ್ತೀಚಿಗೆ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದವರ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಮತ್ತು ಟಿಪ್ಪರ್ ವಾಹನದ ಚಾಲಕನ ಮೇಲೆ ಅಜಾಗರೂಕತೆಯ ವಾಹನ ಚಾಲನೆಗೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಕಾನೂನು, ಸುವ್ಯವಸ್ಥೆ ಹಾಗೂ ಸಂಚಾರಿ ವಿಭಾಗದ ಅಪರ ಪೊಲೀಸ್ ಮಹಾನಿರ್ದೇಶಕ ಪ್ರತಾಪರೆಡ್ಡಿ ಮಾತನಾಡಿ, ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ವಾಹನ ಚಾಲಕರು ಕಾನೂನು ಹಾಗೂ ಸಂಚಾರಿ ನಿಯಮಗಳ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಬೇಕು. ಅಪಾಯಕಾರಿ ರಸ್ತೆ, ತಿರುವು, ಸೇತುವೆಗಳ ಸಮೀಪದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು. ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಅಪಘಾತ ವಲಯಗಳನ್ನು ಗುರುತಿಸಿ, ಎಚ್ಚರಿಕೆ ಸಂದೇಶಗಳನ್ನು ಚಾಲಕರಿಗೆ ಎದ್ದು ಕಾಣುವಂತೆ ಅಳವಡಿಸಬೇಕು ಎಂದರು.