ಹುಬ್ಬಳ್ಳಿ: ಬಿಜೆಪಿ ಭದ್ರಕೋಟೆಯಾಗಿರುವ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಾಳೆಯದಲ್ಲಿ ಟಿಕೆಟ್ಗಾಗಿ ಇದೀಗ ಭಾರಿ ಲಾಬಿ ಶುರುವಾಗಿದೆ. ಹೇಗಾದರೂ ಮಾಡಿ ಟಿಕೆಟ್ ಪಡೆಯಲೇಬೇಕು ಎಂದು ಜಿಲ್ಲೆಯ ಟಿಕೆಟ್ ಆಕಾಂಕ್ಷಿಗಳು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಂಬಾಲು ಬಿದ್ದಿದ್ದಾರೆ.
ನಗರದ ಡೆನಿಸಸ್ ಹೋಟೆಲ್ನಲ್ಲಿ ನಿನ್ನೆ ರಾತ್ರಿ ವಾಸ್ತವ್ಯ ಹೂಡಿದ್ದ ಸಿದ್ದರಾಮಯ್ಯ ಅವರನ್ನು ಟಿಕೆಟ್ ಆಕಾಂಕ್ಷಿಗಳಾದ ಶಾಕೀರ್ ಸನದಿ, ವಿನಯ್ ಕುಲಕರ್ಣಿ, ಸೀಮಾ ಸಾದಿಕ್ ಅವರು ಪರೇಡ್ ನಡೆಸಿದರು.
ಮಾಜಿ ಸಚಿವ ವಿನಯ ಕುಲಕರ್ಣಿ ಅವರು ರಾತ್ರಿಯೇ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನನಗೆ ಟಿಕೆಟ್ ನೀಡಬೇಕು ಎಂದು ಒತ್ತಡ ಹಾಕಿದರು ಎನ್ನಲಾಗಿದೆ. ಇನ್ನು ಇವರ ಬೆನ್ನಲ್ಲೆ ಶಾಕೀರ್ ಸನಿದಿ ಹಾಗೂ ಸೀಮಾ ಸಾದೀಕ್ ಸಹ ಇಂದು ಬೆಳಗ್ಗೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮಗೆ ಟಿಕೆಟ್ ನೀಡುವಂತೆ ಮನವಿ ಮಾಡಿದರು.
ಈ ಸಂಬಂಧ ಸಿದ್ದರಾಮಯ್ಯ, ಸಿಎಂ ಇಬ್ರಾಹಿಮ್ ಸೇರಿದಂತೆ ಸ್ಥಳೀಯ ನಾಯಕರ ಜೊತೆ ಚರ್ಚೆ ನಡೆಸಿದರು. ಆದರೆ, ಟಿಕೆಟ್ ಯಾರಿಗೆ ನೀಡಬೇಕು ಎಂಬುದರ ಬಗ್ಗೆ ವಿಶ್ವಾಸ ಬರದ ಹಿನ್ನೆಲೆ ಕ್ಷೇತ್ರದಲ್ಲಿ ಹೈಕಮಾಂಡ್ ಸೂಕ್ತವಾದ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ. ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ.