ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ್ತೊಂದು ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ. ಒಂದೆಡೆ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡುವಂತೆ ಕೆಲ ಸಂಘಟನೆಗಳು ಒತ್ತಡ ಹಾಕುತ್ತಿವೆ. ಮತ್ತೊಂದೆಡೆ ಈದ್ಗಾ ಮೈದಾನದಲ್ಲಿ ಕನಕ ಜಯಂತಿ ಆಚರಣೆಗೆ ಅನುಮತಿ ನೀಡಬೇಕೆಂದು ಶ್ರೀರಾಮಸೇನೆ ಪಟ್ಟು ಹಿಡಿದಿದೆ. ಇದು ಮಹಾನಗರ ಪಾಲಿಕೆಗೆ ನುಂಗಲಾರದ ತುತ್ತಾಗಿದ್ದು, ಇಲ್ಲದ ವಿವಾದವನ್ನು ಮೈಮೇಲೆ ಎಳೆದುಕೊಂಡತಾಗಿದೆ.
ಈಗಾಗಲೇ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಪಾಲಿಕೆ ಅವಕಾಶ ನೀಡಿದೆ. ಇದೇ ಕಾರಣಕ್ಕೆ ಬೇರೆ ಬೇರೆ ಕಾರ್ಯಕ್ರಮಗಳಿಗೆ, ಜಯಂತಿಗಳಿಗೆ ಹಲವು ಸಂಘಟನೆಗಳು ಈದ್ಗಾ ಮೈದಾನದಲ್ಲಿ ಅನುಮತಿ ಕೇಳುತ್ತಿವೆ. ಈ ಹಿಂದೆ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಡಲಾಗಿತ್ತು. ಈಗ ಇಂತಹ ಗೊಂದಲದಲ್ಲಿ ಪಾಲಿಕೆ ಸಿಕ್ಕಿಹಾಕಿಕೊಳ್ಳುವ ಅನಿವಾರ್ಯತೆ ಬರುತ್ತಲೇ ಇರಲಿಲ್ಲ ಎಂದು ಹೇಳಲಾಗುತ್ತಿದೆ.
ಆದ್ರೆ ಪಾಲಿಕೆ ಅವಕಾಶ ನೀಡಿದ ಹಿನ್ನೆಲೆ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ. ಆದ್ರೆ ಇದರಿಂದ ಹೇಗೆ ಹೊರಬರಬೇಕೆಂದು ಪಾಲಿಕೆ ಅಧಿಕಾರಿಗಳು, ಮೇಯರ್ ಮತ್ತು ಪಾಲಿಕೆ ಸದಸ್ಯರು ಚಿಂತೆಯಲ್ಲಿದ್ದಾರೆ. ಜಯಂತಿ ಆಚರಣೆಗೆ ಅವಕಾಶ ನೀಡುವ ಬಗ್ಗೆ ಚರ್ಚಿಸುತ್ತೇವೆ. ಗಣೇಶ ಪ್ರತಿಷ್ಠಾಪನೆ ಮಾಡುವುದು ಒಂದು ಧಾರ್ಮಿಕ ಕಾರ್ಯಕ್ರಮವಾಗಿದ್ದರಿಂದ ಅನುಮತಿ ನೀಡಲಾಗಿತ್ತು. ಮುಸ್ಲಿಂ ಸಮುದಾಯಕ್ಕೆ ಪ್ರಾರ್ಥನೆಗೆ ಕೊಟ್ಟಿದ್ದು ಅದು ಒಂದು ಧಾರ್ಮಿಕ ಕಾರ್ಯಕ್ರಮವಾಗಿದೆ ಎಂದು ಮೇಯರ್ ಈರೇಶ ಅಂಚಟಗೇರಿ ಹೇಳಿದ್ದಾರೆ.
ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ: ಪಾಲಿಕೆಯಿಂದಲೇ ಸೂಕ್ತ ನಿರ್ಧಾರ ಎಂದ ಶೆಟ್ಟರ್
ಮಹಾಪುರುಷರ ಜಯಂತಿ ಆಚರಣೆ ಮಾಡಲು ಈಗ ಮನವಿ ಬರ್ತಿವೆ. ಇದನ್ನು ಪಾಲಿಕೆ ಆಯುಕ್ತರ ಜತೆಗೆ ಕುಳಿತುಕೊಂಡು ಚರ್ಚೆ ಮಾಡುತ್ತೇವೆ. ಇದು ಪಾಲಿಕೆ ಆಸ್ತಿ, ಪಾಲಿಕೆ ಆಯುಕ್ತರು ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡೋಣ ಎಂದು ಮೇಯರ್ ಹೇಳಿದರು.