ಧಾರವಾಡ: ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸಮಾಜಿ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ ಪ್ರತಿಕ್ರಿಯಿಸಿದ್ದಾರೆ. ಅವನು ಖಾತರಿಯಾಗಿ ಮಣ್ಣು ಮುಕ್ತಾನೆ, ನಮಗೆ ಏನು ಶಕ್ತಿ ಇದೆಯೋ ಅದನ್ನ ನಾವು ಮಾಡ್ತೇವೆ. ಸುಮ್ಮನೇ ಕೂರಲ್ಲ ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಈ ಕುರಿತು ನಗರದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಅವನ ಬಲಗೈ ಬಂಟ ಸಚಿವ ಶ್ರೀರಾಮುಲು ಹಾಗೂ ರೆಡ್ಡಿ ನಡುವೆ ಈಗ ಏನು ಸಂಬಂಧ ಇದೆ ಎಂಬುದರ ಬಗ್ಗೆ ಗೊತ್ತಿಲ್ಲ. ಜನಾರ್ದನ ರೆಡ್ಡಿ ಜೈಲಿನಲ್ಲಿದ್ದಾಗ ಅಕ್ರಮ ಸಂಪತ್ತಿನಿಂದ ಬಿಎಸ್ಆರ್ ಕಾಂಗ್ರೆಸ್ ಎಂಬ ಹೊಸ ಪಕ್ಷ ಕಟ್ಟಿದ್ದ. ಈಗ ಅದೇ ನಾಟಕವನ್ನು ಬೇರೆ ರೂಪದಲ್ಲಿ ಮಾಡುತ್ತಿದ್ದಾನೆ. ಇವತ್ತಿನ ವ್ಯವಸ್ಥೆ ಭ್ರಷ್ಟ ಆಗಿದೆ ಎನ್ನುವುದಕ್ಕೆ ಇವನೊಬ್ಬ ಉದಾಹರಣೆ ಎಂದು ಏಕವಚನದಲ್ಲೇ ಹರಿಹಾಯ್ದರು.
ಇದನ್ನೂ ಓದಿ: ಹಿಂದೂ 'ಅಶ್ಲೀಲ' ಪದ ಹೇಳಿಕೆ: ಸತೀಶ್ ಜಾರಕಿಹೊಳಿ ವಿರುದ್ಧ ಹಿಂದೂ ರಾಷ್ಟ್ರ ಸೇನಾ ಅಧ್ಯಕ್ಷ ಕಿಡಿ!
ನಮ್ಮ ದೇಶದ ಪ್ರಧಾನಿ ನಾ ಖಾವುಂಗಾ ನಾ ಖಾನೆದುಂಗಾ ಅಂತಾರೆ. ಕರ್ನಾಟಕದಲ್ಲಿ ನಡೆದಿರುವ 40 ಸಾವಿರ ಕೋಟಿ ಅಕ್ರಮದ ಹಣವನ್ನು ವಸೂಲಿ ಮಾಡಬೇಕು, ಅವರ ಕರ್ತವ್ಯ ಅದು. ಈ ಹಿಂದೆ ಸಿದ್ದರಾಮಯ್ಯಗೆ ನಾವು 1.43 ಲಕ್ಷ ಕೋಟಿ ಅಕ್ರಮದ ಬಗ್ಗೆ ಹೇಳಿದ್ದೆವು. ಈ ಬಗ್ಗೆ ವರದಿ ಕೊಟ್ಟರೂ ಸಿದ್ದರಾಮಯ್ಯ ಏನು ಮಾಡಲಿಲ್ಲ.
ಸಂತೋಷ ಹೆಗಡೆ ಅವರನ್ನು ಆಕಾಶದವರೆಗೆ ಹೊಗಳಿ, ಬಳ್ಳಾರಿ ಪಾದಯಾತ್ರೆ ವೇಳೆ ಸಂತೋಷ ಹೆಗಡೆ ವರದಿ ಜಾರಿ ಮಾಡಿ ಎಂದು ಇದೇ ಸಿದ್ದರಾಮಯ್ಯ ಹೇಳಿದ್ದರು. ಆದರೆ ಲೋಕಾಯುಕ್ತದ ರೆಕ್ಕೆ ಕಡಿದು ಎಸಿಬಿ ತಂದು ನಿಯಂತ್ರಣ ಮಾಡಿದ್ರು. ಇದು ಜವಾಬ್ದಾರಿಯುತ ರಾಜಕಾರಣಿ ಮಾಡುವ ಕೆಲಸ ಅಲ್ಲ. ಸಿದ್ದರಾಮಯ್ಯ, ಜನಾರ್ದನ ರೆಡ್ಡಿ, ಕುಮಾರಸ್ವಾಮಿ ಇವರು ಜನರ ಮುಂದೆ ಮತಕ್ಕಾಗಿ ಹೋಗಿ ನಾಟಕ ಮಾಡ್ತಾರೆ. ಅವರು ಪ್ರತಿನಿಧಿ ಆಗಲು ಯೋಗ್ಯರು ಇದ್ದಾರಾ ಎಂಬುದನ್ನು ಜನರು ವಿಚಾರ ಮಾಡಬೇಕು ಎಸ್ ಆರ್ ಹಿರೇಮಠ ಹೇಳಿದರು.