ಹುಬ್ಬಳ್ಳಿ: ಲಾಕ್ ಡೌನ್ ಹಿನ್ನೆಲೆ ರಾಜ್ಯದ ವಿವಿಧ ಭಾಗಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಗುಜರಾತ್ ಮೂಲದ ವಿದ್ಯಾರ್ಥಿಗಳಿಗೆ ಊರಿಗೆ ತೆರಳಲು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಿಕೊಡಲಾಯಿತು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ರವರ ಕೋರಿಕೆ ಮೇರೆಗೆ ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ರವರ ನಿರ್ದೇಶನದಂತೆ, ರಾಜ್ಯದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ 58 ಆರ್ಯುವೇದಿಕ್ ವಿದ್ಯಾರ್ಥಿಗಳನ್ನು ಹುಬ್ಬಳ್ಳಿ ವಿಭಾಗದಿಂದ ಮೂರು ರಾಜಹಂಸ ಬಸ್ಸುಗಳಲ್ಲಿ ಕಳಹಿಸಿಕೊಡಲಾಯಿತು.
ಈ ಬಸ್ಗಳು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ಸುಮಾರು 3 ಸಾವಿರ ಕಿ.ಮೀ ಕ್ರಮಿಸಬೇಕಾಗಿದ್ದು, ಲಾಕ್ ಡೌನ್ ಆಗಿರುವುದರಿಂದ ಮಾರ್ಗ ಮಧ್ಯೆ ಯಾವುದೇ ತೊಂದರೆ ಆಗದಂತೆ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಬಸ್ಗಳಿಗೆ ಹೆಚ್ಚುವರಿ ಟಯರ್, ಹೆಡ್ ಲೈಟ್ ಅಸೆಂಬ್ಲಿ ಮತ್ತಿತರ ಟೂಲ್ಸ್ ಗಳನ್ನು ಒದಗಿಸಲಾಗಿದೆ. ಪ್ರತಿ ಬಸ್ಸಿನ ಹೊರ ಮತ್ತು ಒಳಭಾಗವನ್ನು ಸಂಪೂರ್ಣವಾಗಿ ಡೆಟಾಲ್ ಮತ್ತು ಫಿನಾಯಿಲ್ ಮಿಶ್ರಿತ ಕ್ರಿಮಿನಾಶಕದಿಂದ ತೊಳೆದು, ಬಾಗಿಲು, ಕಿಟಕಿ, ಸೀಟ್ಗಳನ್ನು ಮತ್ತು ಹ್ಯಾಂಡ್ ರೇಲ್ ಗಳನ್ನು ಸ್ಯಾನಿಟೈಜರ್ನಿಂದ ಶುಚಿಗೊಳಿಸಲಾಗಿದೆ.
ಎಲ್ಲಾ 58 ವಿದ್ಯಾರ್ಥಿಗಳು ಮತ್ತು ಮೂರು ಬಸ್ಗಳಿಗೆ ನಿಯೋಜಿಸಲಾದ 6 ಚಾಲಕರನ್ನು ಆಯಾ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಕೊರೊನಾ ಪರೀಕ್ಷೆಗೊಳಪಡಿಸಲಾಗಿದೆ. ಎಲ್ಲರಿಗೂ ಮಾಸ್ಕ್ ಒದಗಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.