ಹುಬ್ಬಳ್ಳಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕೈಗೊಂಡಿವೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ರಾಜ್ಯದಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದಾರೆ. ಇಂದು ರಾಜ್ಯ ಚುನಾವಣಾ ಆಖಾಡಕ್ಕೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪ್ರವೇಶಿಸಲಿದ್ದು, ಸಂಜೆ 5.30ಕ್ಕೆ ಹುಬ್ಬಳ್ಳಿ ನಗರದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಕರ್ನಾಟಕವು ನೆಹರೂ ಮತ್ತು ಗಾಂಧಿ ಕುಟುಂಬದೊಂದಿಗೆ ಸುದೀರ್ಘವಾದ ಸಂಪರ್ಕ ಹೊಂದಿದೆ. 1978ರಲ್ಲಿ ನಡೆದ ಉಪಚುನಾವಣೆಯಲ್ಲಿ ಇಂದಿರಾ ಗಾಂಧಿ ಕರ್ನಾಟಕದ ಚಿಕ್ಕಮಗಳೂರಿನಿಂದ ಗೆದ್ದು ರಾಜಕೀಯ ಪುನರಾಗಮನ ಮಾಡಿದ್ದರು. ಸೋನಿಯಾ ಗಾಂಧಿ ಅವರು ತಮ್ಮ ಚೊಚ್ಚಲ ಚುನಾವಣೆಯಲ್ಲಿ ರಾಜ್ಯದ ಬಳ್ಳಾರಿಯಿಂದ ಸ್ಪರ್ಧಿಸಿದ್ದರು. ಜೊತೆಗೆ, ಅಮೇಥಿಯಿಂದಲೂ ಸಹ ಕಣಕ್ಕಿಳಿದಿದ್ದರು. ಈ ಬಾರಿಯ ಚುನಾವಣೆ ಭಾರಿ ಪ್ರತಿಷ್ಟೆಯಾಗಿದ್ದು, ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಿದರೆ ದಕ್ಷಿಣದ ಯಾವ ರಾಜ್ಯದಲ್ಲೂ ಬಿಜೆಪಿ ಅಧಿಕಾರದಲ್ಲಿರುವುದಿಲ್ಲ. ಹಾಗಾಗಿ, ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಮಣಿಸಲು ಶತ ಪ್ರಯತ್ನ ನಡೆಸುತ್ತಿದೆ.
ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ ಲೋಕಸಭೆಯಿಂದ ಅನರ್ಹಗೊಂಡಿರುವ ಕಾರಣ ಮತ್ತು 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎದುರಿಸಿದ ಚುನಾವಣಾ ಸೋಲುಗಳಿಂದಾಗಿ ಎಚ್ಚೆತ್ತುಕೊಂಡಿದೆ. ಅಷ್ಟೇ ಅಲ್ಲದೆ, ಪ್ರಬಲ ರಾಜ್ಯ ನಾಯಕತ್ವವನ್ನು ಹೊಂದಿರುವ ಕರ್ನಾಟಕದ ಗೆಲುವಿನ ಮೇಲೆ ಕಾಂಗ್ರೆಸ್ ಈ ಬಾರಿ ಬಲವಾದ ನಂಬಿಕೆ ಇಟ್ಟುಕೊಂಡಿದೆ.
ಇದನ್ನೂ ಓದಿ : ಸೋನಿಯಾ ಗಾಂಧಿ ವಿಷಕನ್ಯೆ ಏನು?... ಖರ್ಗೆ ಹೇಳಿಕೆ ಬಗ್ಗೆ ಯತ್ನಾಳ್ ಪ್ರಶ್ನೆ
ರಾಹುಲ್ ಗಾಂಧಿ ರಾಜ್ಯದಲ್ಲಿ ಇದುವರೆಗೆ 17 ರ‍್ಯಾಲಿ ಮತ್ತು ರೋಡ್‌ಶೋಗಳನ್ನು ನಡೆಸಿದ್ದಾರೆ. ಸಹೋದರಿ ಪ್ರಿಯಾಂಕಾ ಗಾಂಧಿ 19 ರ‍್ಯಾಲಿಗಳನ್ನು ಮಾಡಿದ್ದಾರೆ. ಗಾಂಧಿ ಕುಟುಂಬದ ಸದಸ್ಯರಲ್ಲದೆ, ಕರ್ನಾಟಕದವರೇ ಆದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ 20 ದಿನಗಳಿಂದ ರಾಜ್ಯದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಕಳೆದ ಎರಡು ತಿಂಗಳಿಂದ ಇಲ್ಲಿಯೇ ಬೀಡು ಬಿಟ್ಟಿದ್ದಾರೆ.
ಇದನ್ನೂ ಓದಿ : ಸೋನಿಯಾ 'ವಿಷಕನ್ಯೆ' ಎಂದ ಯತ್ನಾಳರನ್ನು ಪಕ್ಷದಿಂದ ವಜಾ ಮಾಡಿ, ಪಿಎಂ, ಸಿಎಂ ಕ್ಷಮೆಯಾಚಿಸಬೇಕು: ಡಿಕೆಶಿ ಆಗ್ರಹ
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಯಾವುದೇ ರಾಜ್ಯ ಚುನಾವಣೆ ಪ್ರಚಾರ ಮಾಡಿರಲಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸಂಸದೀಯ ಕ್ಷೇತ್ರ ರಾಯ್ ಬರೇಲಿಯಲ್ಲಿ ಕೊನೆಯ ಚುನಾವಣಾ ರ‍್ಯಾಲಿ ನಡೆಸಿದ್ದರು. ಬಳಿಕ ಡಿಸೆಂಬರ್ 14, 2019ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾರತ್ ಬಚಾವೋ ರ‍್ಯಾಲಿಯಲ್ಲಿ ಭಾಷಣ ಮಾಡಿದ್ದರು. ಇಂದು ಹುಬ್ಬಳ್ಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚುನಾವಣಾ ರ‍್ಯಾಲಿ ಮೂಲಕ ಮತಬೇಟೆ ನಡೆಸಲಿದ್ದಾರೆ.
ಇದನ್ನೂ ಓದಿ : ಬಿಜೆಪಿ ರಾಷ್ಟ್ರೀಯ ನಾಯಕರು 40% ಸರ್ಕಾರದ ಕಳಂಕ ತೆಗೆದು ಹಾಕ್ತಾರಾ?: ಸಿದ್ದರಾಮಯ್ಯ