ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಯಲು ಶೌಚ ಮುಕ್ತ ಮಾಡಲು ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿ ಶೌಚಾಲಯ ನಿರ್ಮಾಣ ಮಾಡಿದರೂ ಸಹ ಜನರು ಇನ್ನೂ ಬಯಲು ಶೌಚಾಲಯಕ್ಕೆ ಹೋಗುವ ದೃಶ್ಯಗಳು ಸಾಮಾನ್ಯವಾಗಿವೆ.
ಸರ್ಕಾರ ಬಯಲು ಶೌಚ ಮುಕ್ತ ಮಾಡಲು ಶ್ರಮಿಸುತ್ತಿದ್ದು, ಮಹಾನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಅಳವಡಿಸಿರುವ ಇ-ಶೌಚಾಲಯಗಳ ಬಳಕೆ ಕಡಿಮೆಯಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣ ಮಾಡಿದ ಇ-ಶೌಚಾಲಯದಲ್ಲಿ ಒಂದು ರೂ. ನಾಣ್ಯ ಹಾಕಿ ಗಂಟೆ ಕಳೆದರೂ ಬಾಗಿಲು ತೆರೆಯುವುದಿಲ್ಲ. ಹಣ ಹಾಕಿದರೂ ಕಾರ್ಯನಿರ್ವಹಿಸುತ್ತಿಲ್ಲ. ಅಷ್ಟೇ ಅಲ್ಲದೆ ಸ್ವಚ್ಛತೆ ಕಣ್ಮರೆಯಾಗಿದ್ದು, ಸಾರ್ವಜನಿಕರಿಗೆ ಕೆಲವು ಕಡೆ ಮೂಗು ಮುಚ್ಚಿಕೊಂಡೇ ಇ-ಶೌಚಾಲಯ ಬಳಕೆ ಮಾಡುವ ಅನಿವಾರ್ಯತೆ ಎದುರಾಗಿದೆ.
ಇದೆಲ್ಲಕ್ಕಿಂತ ಮುಖ್ಯವಾಗಿ ನೈರ್ಮಲ್ಯ ಕಾಯ್ದುಕೊಳ್ಳಬೇಕಾಗಿದ್ದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಂದೇ ನಾಣ್ಯ ಹಾಕಿ 3-4 ಜನರು ಶೌಚಾಲಯ ಬಳಸುತ್ತಿರುವ ಆರೋಪವು ಸಹ ಕೇಳಿ ಬರುತ್ತಿದೆ. ಒಬ್ಬ ವ್ಯಕ್ತಿಗೆ ಬಳಕೆ ಆಗುವ ನೀರನ್ನು ನಾಲ್ಕು ಮಂದಿಗೆ ಬಳಸಲಾಗುತ್ತಿದೆ. ಇದರಿಂದ ಬಹುತೇಕ ಇ-ಶೌಚಾಲಯಗಳು ಗಬ್ಬು ನಾರುತ್ತಿರುವುದರಿಂದ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.