ಹುಬ್ಬಳ್ಳಿ: ಡ್ರಗ್ಸ್ ಜಾಲದಲ್ಲಿ ಯಾರೇ ಇದ್ದರು ಕಠಿಣ ಕ್ರಮ ಕೈಗೊಳ್ಳಬೇಕು. ದೊಡ್ಡವರು ಸಣ್ಣವರು ಅನ್ನೋದು ಬೇಡ. ಯಾರೇ ರಾಜಕೀಯ ನಾಯಕರು ಇದ್ದರು ಕ್ರಮ ಕೈಗೊಳ್ಳಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಜಮೀರ್ ಅಹ್ಮದ್ ವಿರುದ್ಧ ಸಾಕ್ಷ್ಯ ಇದ್ದರೆ ಗಲ್ಲಿಗೇರಿಸಲಿ ಅಂತ ಹೇಳಿದ್ದಾರೆ. ಅವರ ಆಸ್ತಿಯನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳಲಿ. ಅದನ್ನು ಬಿಟ್ಟು ರಾಜಕೀಯವಾಗಿ ಮುಗಿಸಲು ಆರೋಪ ಮಾಡಬಾರದು. ಸಾಕ್ಷ್ಯ ಸಿಕ್ಕರೆ ಕ್ರಮ ಕೈಗೊಳ್ಳಲಿ, ಸಂಬರಗಿ ಹೇಳಿದರು ಅಂತ ತನಿಖೆ ಮಾಡೋಕೆ ಆಗುತ್ತಾ ಎಂದಿದ್ದಾರೆ.
ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರನಿಗೆ ನೋಟಿಸ್ ಜಾರಿ ವಿಚಾರವಾಗಿ ಮಾತನಾಡಿದ ಅವರು, ಅನಗತ್ಯವಾಗಿ ಸಿಬಿಐ ವಿಚಾರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬರ ಪರಿಹಾರ ಕುರಿತು ಮಾತನಾಡಿ, ಬರ -ನೆರೆ ಪ್ರರಿಹಾರ ಇನ್ನೂ ಕೊಟ್ಟಿಲ್ಲ 25 ಸಂಸದರು ಇದ್ದರು ಪ್ರಯೋಜನವಾಗಿಲ್ಲ. ಕಳೆದ ವರ್ಷ ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಆದರೆ ಇದುವರೆಗೂ ಪರಿಹಾರ ನೀಡಿಲ್ಲ ಎಂದಿದ್ದಾರೆ
ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವೈಫಲ್ಯದ ಬಗ್ಗೆ ಮಾತನಾಡಿ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಚರ್ಚೆ ನಡೆಸುತ್ತೇವೆ. ಮೂರು ವಾರಗಳ ಕಾಲ ಅಧಿವೇಶನ ನಡೆಸಲಿ ಅಂತ ನಾನು ಸಿಎಂ ಬಿಎಸ್ವೈಗೆ ಪತ್ರ ಬರೆದಿರುವೆ. ನಾಲ್ಕು ಜನರ ಮೇಲೆ ಗೋಲಿಬಾರ್ ಮಾಡಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನೋದು ಸತ್ಯ ಎಂದರು.
ಡಿಜೆ ಹಳ್ಳಿ.ಕೆಜೆ ಹಳ್ಳಿ ಪ್ರಕರಣದಲ್ಲಿ ನವೀನ್ನನ್ನ ತಕ್ಷಣ ಬಂಧನ ಮಾಡಿದ್ದರೆ ಬೆಂಕಿ ಹಚ್ಚುತ್ತಿರಲಿಲ್ಲ. ಬೆಂಕಿ ಹಚ್ಚುವುದು ಕಾನೂನುಬಾಹಿರ. ನಾನು ಸಹ ಬೆಂಕಿ ಹಾಕಿರುವುದನ್ನು ಖಂಡಿಸುತ್ತೇನೆ ಎಂದರು.
ಸಿಎಂ ಬದಲಾವಣೆ ವಿಚಾರವಾಗಿ ನಾನು ಮಾತನಾಡಲ್ಲ. ಅವರು ಯಾರನ್ನಾದರೂ ಮಾಡಿಕೊಳ್ಳಲಿ. ರಾಜ್ಯವಂತು ದಿವಾಳಿಯಾಗಿದೆ. ಅಲ್ಲದೇ ಸಿಎಂ ಮತ್ತು ಕುಮಾರಸ್ವಾಮಿ ಏನು ಮಾತನಾಡಿಕೊಂಡಿದ್ದಾರೆ ಅಂತಾ ನನಗೆ ಗೊತ್ತಿಲ್ಲ. ಆಸ್ಪತ್ರೆಯಲ್ಲಿದ್ದಾಗ ಒಮ್ಮೆ ಯಡಿಯೂರಪ್ಪನವರ ಜೊತೆಗೆ ಮಾತನಾಡಿದ್ದೆ. ಇಬ್ಬರು ಒಂದೇ ಆಸ್ಪತ್ರೆಯಲ್ಲಿ ಇದ್ದೆವು ಡಿಸ್ಚಾರ್ಜ್ ಆಗುವಾಗ ದೂರವಾಣಿ ಕರೆ ಮಾಡಿದರು ಮಾತನಾಡಿದ್ದೆಎಂದ ಸಿದ್ದರಾಮಯ್ಯ, ಜೆಡಿಎಸ್ ನವರಿಗೆ ಸ್ಪಷ್ಟವಾದ ನಿಲುವಿಲ್ಲ. ಅವರು ಯಾವಾಗ ಬೇಕೋ ಅವಾಗ ಅವರನ್ನ ತಬ್ಬಿಕೊಳ್ಳತಾರೆ ಎಂದು ವ್ಯಂಗ್ಯವಾಡಿದರು.