ಹುಬ್ಬಳ್ಳಿ: ಕಾನೂನು ಸುವ್ಯವಸ್ಥೆ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ವಿಫಲವಾಗಿದೆಯೆಂದರೆ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿಯೇ ವಿಫಲ ಎಂದರ್ಥ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರಣಿ ಕೊಲೆಗಳು ನಡೆಯುತ್ತಿವೆ. ಇವರ ಕೈಯಲ್ಲಿ ಜನರ ಪ್ರಾಣ ಉಳಿಸೋದಕ್ಕೂ ಸಾಧ್ಯವಾಗುತ್ತಿಲ್ಲ. ಈವರೆಗಿನ ಸಾವಿನ ಪ್ರಕರಣಗಳ ಹೊಣೆಯನ್ನು ರಾಜ್ಯದ ಸಿಎಂ ಹಾಗೂ ಗೃಹ ಸಚಿವರೇ ಹೊರಬೇಕು. ನಿಮ್ಮಿಂದ ಯಾರನ್ನೂ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.
ಹೀಗಂತ ಸಂಘ ಪರಿವಾರದವರೇ ಹೇಳುತ್ತಿದ್ದಾರೆ. ನಿಮಗೆ ರಕ್ಷಣೆ ನೀಡೋಕೆ ಸಾಧ್ಯವಾಗದೇ ಇದ್ದರೆ ರಾಜೀನಾಮೆ ಕೊಡಿ. ಬಿಜೆಪಿ ಅಧಿಕಾರದಲ್ಲಿದ್ದರೆ ಯಾರಿಗೂ ರಕ್ಷಣೆ ಇಲ್ಲ ಅನ್ನೋದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಎಸ್ಡಿಪಿಐ-ಪಿಎಫ್ಐ ಪ್ರಚೋದನೆ ಕುರಿತು ಸಾಕ್ಷಿ ಇದ್ದರೆ ಅವುಗಳನ್ನು ಬ್ಯಾನ್ ಮಾಡಲಿ. ಅವರೇ ಸಾಕಿದ ಆ ಸಂಘಟನೆಗಳನ್ನು ಅವರೇ ಕಿತ್ತು ಹಾಕಲಿ ಎಂದು ಸವಾಲು ಹಾಕಿದರು.
ಹತ್ಯೆಯಾದ ಯುವಕರ ಮನೆಗೆ ಸಿಎಂ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇವರು ಕೇವಲ ಒಂದು ವರ್ಗಕ್ಕೆ ಮಾತ್ರ ಸಿಎಂ ಆಗಿದ್ದಾರೆ. ಕೇವಲ ಒಂದು ವರ್ಗದ ಮನೆಗೆ ಸಿಎಂ ಭೇಟಿ ನೀಡೋದು ಎಷ್ಟರ ಮಟ್ಟಿಗೆ ಸರಿ. ನಾನು ಸಿಎಂ ಇದ್ದಾಗ ಎಲ್ಲ ವರ್ಗದ ಮನೆಗಳಿಗೂ ಭೇಟಿ ನೀಡಿದ್ದೇನೆ. ಪರಿಹಾರ ನೀಡುವುದರಲ್ಲೂ ತಾರತಮ್ಯ ಮಾಡುತ್ತಿದ್ದಾರೆ. ಇದನ್ನ ರಾಜಧರ್ಮ ಎನ್ನಲಾಗುತ್ತದೆಯೇ? ರಾಜಧರ್ಮ ಅಂದ್ರೆ ಇದೇನಾ ಎಂದು ಪ್ರಶ್ನಿಸಿದರು. ಜನ ಚುನಾವಣೆಗಾಗಿ ಕಾಯುತ್ತಿದ್ದಾರೆ. ನಾಳೆಯೇ ಚುನಾವಣೆ ನಡೆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದರು.
ಶೀಘ್ರದಲ್ಲೇ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜಕೀಯ ವ್ಯವಹಾರ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆಯಾಗಲಿದೆ. ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಬರುತ್ತಿಲ್ಲ. ಮುನಿಯಪ್ಪ ಅವರ ಆರೋಗ್ಯ ಸರಿ ಇಲ್ಲ. ಖರ್ಗೆಯವರು ಹೆರಾಲ್ಡ್ ಪತ್ರಿಕೆ ದಾಳಿ ಕಾರಣಕ್ಕೆ ದೆಹಲಿಯಲ್ಲಿ ಬ್ಯುಸಿ ಇದ್ದಾರೆ. ಮುನಿಯಪ್ಪಗೆ ಡೆಂಗ್ಯೂ ಜ್ವರ ಬಂದಿದ್ದರಿಂದ ಕರೆ ಮಾಡಿ ತಿಳಿಸಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ್ ರೆಗ್ಯೂಲರ್ ಬೇಲ್ ಸಿಕ್ಕಿದ್ದು ನಿರೀಕ್ಷಿತ. ಅಲ್ಲದೇ ನಾಳೆ ನಡೆಯುತ್ತಿರುವುದು ಸಿದ್ದರಾಮೋತ್ಸವ ಅಲ್ಲ, ಅಮೃತೋತ್ಸವ. 75 ವರ್ಷ ತುಂಬಿದಾಗ ಏನಂತ ಕರೆಯೋದು? ಇದನ್ನು ನಮ್ಮ ಸ್ನೇಹಿತರು, ಹಿತೈಷಿಗಳು ಸೇರಿಕೊಂಡು ಆಚರಿಸುತ್ತಿದ್ದಾರೆ. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದು ಮಾಧ್ಯಮಗಳ ಸೃಷ್ಟಿ. ಅಲ್ಲದೆ, ಅಭಿಮಾನಿಗಳ ಸೃಷ್ಟಿದ ಅಲ್ಬಂ ಸಾಂಗ್ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದರು.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್: ದೆಹಲಿ ಇಡಿ ವಿಶೇಷ ನ್ಯಾಯಾಲಯದಿಂದ ಡಿಕೆಶಿಗೆ ಜಾಮೀನು ವಿಸ್ತರಣೆ