ಹುಬ್ಬಳ್ಳಿ : ಸಿದ್ದರಾಮಯ್ಯ ಅವರು ನನ್ನ ನಂತರ ದಲಿತರನ್ನು ಮುಖ್ಯಮಂತ್ರಿ ಮಾಡುವದಾಗಿ ಹೇಳಿ, ಈಗ ಮತ್ತೇ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಚಿಂದಿ ಚಿತ್ರಾನ್ನವಾಗಿದೆ. ಸಿದ್ದರಾಮಯ್ಯನವರೇ ಕಾಂಗ್ರೆಸ್ ಪಕ್ಷದ ವಿಲನ್. ಈಗ ಮತ್ತೊಮ್ಮೆ ನಾನೇ ಮುಖ್ಯಮಂತ್ರಿ ಅಂತಿದ್ದಾರೆ. ನಾನೇ ಹಿಂದುಳಿದ ವರ್ಗದ ಚಾಂಪಿಯನ್ ಅಂತ ಹೇಳುವ ಸಿದ್ದರಾಮಯ್ಯ ಏನ್ ಮಾಡಿದ್ದಾರೆ. ಕಾಗಿನೆಲೆ ಪೀಠ, ಬಂಜಾರ ಪೀಠಕ್ಕೆ ಅನುದಾನ ನೀಡಿದ್ದು ನಾವು. ಜಾತಿ-ಜಾತಿಗಳ ಮಧ್ಯೆ ಜಗಳ ತಂದಿಟ್ಟ ಈಗ ಕ್ಷಮೆ ಕೇಳುತ್ತಿದ್ದಾರೆ.
ಸಿದ್ದರಾಮಯ್ಯನವರ ಹಣೆಬರಹ ಗೊತ್ತಿದ್ದೆ. ಚಾಮುಂಡೇಶ್ವರಿ ಜನ ಸೋಲಿಸಿದ್ರು, ಬಾದಾಮಿ ಜನರಿಗೆ ಇವರ ಹಣೆಬರಹ ಗೊತ್ತಿಲ್ಲದೆ ಗೆಲ್ಲಿಸಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ನಿರ್ನಾಮವಾಗುತ್ತಿದೆ. ಕಾಂಗ್ರೆಸ್ ಜೆಡಿಎಸ್ ಸ್ಥಳೀಯ ಸಂಸ್ಥೆಗಳಲ್ಲಿ ಬೇರೆ ಬೇರೆ ನಿಲ್ಲುವ ಮಾತನಾಡುತ್ತಿದ್ದಾರೆ. ಆಗಾದ್ರೆ ಮೈತ್ರಿ ಮುಗಿದು ಹೊಯ್ತಾ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಬೊಗಳೆ ಬಿಡುತ್ತಾರೆ
ಗೋವಿಂದ ಕಾರಜೋಳ ಮಾತನಾಡಿ, ಸಿದ್ದರಾಮಯ್ಯ ನವರು ಬೊಗಳೆ ಬಿಡುತ್ತಾರೆ, ಬರಿ ಸುಳ್ಳು ಹೇಳುವದು ಸಿದ್ದರಾಮಯ್ಯನವರ ಕಾಯಕ. ಮೂರು ಜಿಲ್ಲೆಗೆ ಈ ಸಮ್ಮಿಶ್ರ ಸರ್ಕಾರ ಫೀಕ್ಸ್ ಆಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿ ಮುಗಿಸುತ್ತೇನೆಂದು ಹೇಳಿದ್ರು, ಆದ್ರೆ ಮಾಡಲಿಲ್ಲ. ಕುಂದಗೋಳಕ್ಕೆ ಬಂದು ಹಿಂದುಳಿದವರ ಉದ್ಧಾರ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ ಎಂದು ಹರಿಹಾಯ್ದರು.
ಮೈತ್ರಿ ಸರ್ಕಾರ ಸರ್ವಾಧಿಕಾರಿ ಧೋರಣೆ ತೊರುತ್ತಿದೆ
ರಾಜ್ಯದಲ್ಲಿ ತುರ್ತುಪರಿಸ್ಥಿತಿ ಘೋಷಣೆ ಆದಂತಿದೆ. ಲಿಂಗಾಯತ ಧರ್ಮ ವಿಚಾರವಾಗಿ ಸೋನಿಯ ಗಾಂಧಿಗೆ ಬರೆದ ಪತ್ರದ ತನಿಖೆ ನಡೆಯುತ್ತಿರುವಾಗ ಬಿಜೆಪಿಯ ಕಾರ್ಯಕರ್ತರನ್ನ ಜೈಲಿಗೆ ಕಳುಹಿಸಿದ್ರು. ಈ ಪ್ರಕರಣಗಳನ್ನ ಹಿಂದಕ್ಕೆ ಪಡೆಯಬೇಕು, ನಾಳೆ ಈ ಘಟನೆಗಳನ್ನು ಖಂಡಿಸಿ ರಾಜ್ಯದಲ್ಲಿ ಪ್ರತಿಭಟನೆ ಮಾಡುತ್ತೇವೆ.
ಮೋದಿಯವರ ಬಗ್ಗೆ ಸಿದ್ದರಾಮಯ್ಯ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಮೊದಲು ಅವರನ್ನ ಜೈಲಿಗೆ ಕಳುಹಿಸಬೇಕು. ಈ ಸರ್ಕಾರದ ಪತನ ಆರಂಭವಾಗಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಜಗದೀಶ್ ಶೆಟ್ಟರ್ ಗುಡುಗಿದರು.