ಧಾರವಾಡ: ವಿಧಾನ ಪರಿಷತ್ ಚುನಾವಣೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಅವರು ನಾಮಪತ್ರ ಸಲ್ಲಿಕೆ ಮಾಡಿದರು.
ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಪಾರ ಅಭಿಮಾನಿಗಳೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ ಅವರು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ನಾಮಪತ್ರ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಪತ್ರದ ಅಫಿಡವಿಟ್ ಸಮಸ್ಯೆ ಆಗಿತ್ತು. ಅದನ್ನು ಟೈಪ್ ಮಾಡಿಸಿ ಕೊಡಬೇಕಾದ್ರೆ ವಿಳಂಬ ಆಯಿತು. ಮೂರು ಸೆಟ್ ಸಲ್ಲಿಸಿದ್ವಿ. ನಾಲ್ಕನೇ ಸೆಟ್‌ಗೆ ಹೊಸದಾಗಿ ಟೈಪ್ ಮಾಡಿಸಿ ಕೊಟ್ಟಿದ್ದೇವೆ ಎಂದು ಹೇಳಿದರು.
ನಾನು ಹೊರಗಿನವನೆಂಬ ವಿಚಾರಕ್ಕೆ ಮಾತನಾಡಿದ ಅವರು, 25 ವರ್ಷದಿಂದ ನಾನು ಹಾವೇರಿ ಕ್ಷೇತ್ರದ ಮತದಾರ. ಹೊರಗಿನಿಂದ ಬಂದವನಲ್ಲ. ಇಲ್ಲಿಯೇ ಇದ್ದು ಕೆಲಸ ಮಾಡಿದ್ದೇನೆ. ಹೀಗಾಗಿ ನಾನು ಹೊರಗಿನವನಲ್ಲ ಎಂದರು.
ನಾಮಪತ್ರ ಸಲ್ಲಿಕೆ ವೇಳೆ ಗದ್ದಲ
ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿ ಒಳಗೆ ಹೋದ ಸಂದರ್ಭ ಮುಖಂಡರು ಮತ್ತು ಪೊಲೀಸರ ಮಧ್ಯೆ ವಾಕ್ ಸಮರ ನಡೆಯಿತು.
ನಿಗದಿತ ಜನರನ್ನು ಮಾತ್ರ ಬಿಡುತ್ತೇವೆ ಅಂತಾ ಪೊಲೀಸರು ಹೇಳಿದರು. ಆಗ ನಾವೂ ಒಳಗೆ ಹೋಗಬೇಕೆಂದು ಕೈ ಕಾರ್ಯಕರ್ತರು ಪಟ್ಟು ಹಿಡಿದರು. ಗೇಟ್ ಎಳೆದಾಡಿ ಗದ್ದಲ ಮಾಡಿದರು. ಈ ವೇಳೆ ಹರಸಾಹಸ ಮಾಡಿ ಶಾಸಕ ಶ್ರೀನಿವಾಸ ಮಾನೆ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಜಿಲ್ಲಾಧಿಕಾರಿ ಕಚೇರಿ ಒಳಗೆ ಹೋದರು.
ಇದನ್ನೂ ಓದಿ: ಚಿಕ್ಕಮಗಳೂರು: ದೇವಸ್ಥಾನಕ್ಕೆ ದೇಣಿಗೆ ನೀಡಿ ಮಾದರಿಯಾದ ವೃದ್ಧೆ