ಹುಬ್ಬಳ್ಳಿ: ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ಯತ್ನಿಸುತ್ತಿರುವ ಜನಾರ್ದನ ರೆಡ್ಡಿಗೆ 150 ರಿಂದ 200 ವರ್ಷಗಳ ಶಿಕ್ಷೆಯಾಗಬೇಕಿತ್ತು. ಆದರೆ ದೇಶದ ಪ್ರಧಾನ ಸೇವಕ ಎಂದು ಹೇಳಿಕೊಳ್ಳುವ ನರೇಂದ್ರ ಮೋದಿ ಯಾಕೆ ಸುಮ್ಮನೆ ಕೂತಿದ್ದಾರೆ ಗೊತ್ತಾಗುತ್ತಿಲ್ಲ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಮೇಲೆ 40 ಸಾವಿರ ಕೋಟಿ ರೂ.ಗಳ ಅವ್ಯವಹಾರದ ಆರೋಪವಿದೆ. ಅಕ್ರಮ ಗಣಿಗಾರಿಕೆಯಿಂದ ಪ್ರಾಕೃತಿಕ ಸಂಪತ್ತು ಲೂಟಿ ಹೊಡೆದಿದ್ದಾರೆ. ಹಿರಿಯ ಅಧಿಕಾರಿ ವಿ. ಸಿಂಗ್ ಅವರಿಗೂ ಬೆದರಿಕೆ ಹಾಕಿದ್ದರು. ಇಂಥವರಿಗೆ ಯಾವುದೇ ಕಾರಣಕ್ಕೂ ಬಳ್ಳಾರಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಬಾರದು. ತಂದೆ ಅಥವಾ ತಾಯಿಯ ಅನಾರೋಗ್ಯದ ಕಾರಣದಿಂದ ಬಳ್ಳಾರಿಗೆ ಹೋದರೂ ಅವರ ಮೇಲೆ ನಿಗಾ ಇಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂವಿಧಾನದ ಪ್ರಕಾರ ಮುನ್ನಡೆದರೆ ರೆಡ್ಡಿಗೆ 150 ರಿಂದ 200 ವರ್ಷ ಜೈಲು ಶಿಕ್ಷೆ ಆಗುತ್ತದೆ. ಅಷ್ಟು ವರ್ಷಗಳ ಕಾಲ ಮನುಷ್ಯ ಜೀವಿಸುವುದೇ ಇಲ್ಲ. ಆದರೆ ರೆಡ್ಡಿ ಮಾಡಿರುವ ಅಪರಾಧ ಕೃತ್ಯಗಳು ಅಷ್ಟು ಗಂಭೀರವಾಗಿವೆ. ಬೇರೆ ದೇಶಗಳಲ್ಲಿ ಈ ರೀತಿಯ ಶಿಕ್ಷೆ ಕೊಟ್ಟಿದ್ದೂ ಇದೆ.
ಜನಾರ್ದನ ರೆಡ್ಡಿ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾಕೆ ಕೈಕಟ್ಟಿಕೊಂಡು ಕೂತಿದೆಯೋ ಗೊತ್ತಾಗ್ತಿಲ್ಲ. 'ನ ಖಾವುಂಗಾ-ನ ಖಾನೆ ದೂಂಗಾ' ಅನ್ನೋ ಮೋದಿ ಯಾಕೆ ಇದರ ಬಗ್ಗೆ ಗಮನಹರಿಸುತ್ತಿಲ್ಲ?. ಪ್ರಧಾನಿ ಮೋದಿ ಅವರಿಂದ ವ್ಯವಸ್ಥೆಯ ದುರ್ಬಳಕೆ ನಡೆದಿದೆ. ಹಿಂದೆ ಇಂದಿರಾ ಗಾಂಧಿ ಹೀನಾಯವಾಗಿ ಸೋತಂತೆ ಮೋದಿ ಅವರನ್ನು ಹೀನಾಯವಾಗಿ ಸೋಲಿಸುವುದೇ ನಮ್ಮ ಗುರಿ. ಪ್ರಧಾನಿ ಮೋದಿಗೆ ಪಾಠ ಕಲಿಸುವ ಮೂಲಕ ವ್ಯವಸ್ಥೆಯನ್ನು ಬದಲು ಮಾಡುವ ಪ್ರಯತ್ನದಲ್ಲಿ ನಾವಿದ್ದೇವೆ ಎಂದರು.
'ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಮುಂದೂಡಬೇಕು'
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯನ್ನು ಮುಂದೂಡಬೇಕು. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಜನರು ಈಗಾಗಲೇ ಸಾಕಷ್ಟು ಸಾವು-ನೋವು ಕಂಡಿದ್ದಾರೆ. ಈ ಮೊದಲು ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಾಸ್ಕ್ ಹಾಕದೆ ಸಾಮಾಜಿಕ ಅಂತರ ಕಾಪಾಡದೆ, ರ್ಯಾಲಿ ಮಾಡಿ ಚುನಾವಣೆ ನಡೆಸಿದ್ದರಿಂದ ಅಲ್ಲಿ ಕೊರೊನಾ ಹತೋಟಿ ಕೈ ತಪ್ಪಿತ್ತು. ಇದು ಎರಡನೇ ಅಲೆಗೆ ಕಾರಣವಾಗಿತ್ತು. ಈಗ ಸ್ಥಳೀಯ ಸಂಸ್ಥೆಯ ಚುನಾವಣೆ ಘೋಷಣೆಯಾಗಿದೆ. ಮತ್ತೆ ಸರ್ಕಾರ ಜವಾಬ್ದಾರಿ ಮರೆತು ಚುನಾವಣೆ ನಡೆಸಬಾರದು. ಈ ಕೂಡಲೇ ಸರ್ಕಾರ ಪಾಲಿಕೆ ಚುನಾವಣೆ ಮುಂದೂಡಲು ಕ್ರಮ ತೆಗೆದುಕೊಳ್ಳಬೇಕೆಂದರು.