ಧಾರವಾಡ : ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಜಾಗದಲ್ಲಿ ಕೆರೆಗಳಿದ್ದರೆ ಅವುಗಳನ್ನು ಮುಚ್ಚಿ ಹಾಕಿ ಅಲ್ಲಿ ಬಡಾವಣೆಗಳನ್ನು ನಿರ್ಮಿಸುವ ಜನರೇ ಹೆಚ್ಚು. ಇಂತಹ ಸಂದರ್ಭದಲ್ಲಿ ಸ್ಥಳೀಯ ನಾಲ್ಕು ಬಡಾವಣೆಗಳ ಜನ ಲಾಕ್‌ಡೌನ್ ಅವಧಿಯಲ್ಲಿ ಕೆರೆಯೊಂದನ್ನು ನಿರ್ಮಾಣ ಮಾಡುವ ಮೂಲಕ ನೆರೆಹೊರೆಯವರು ನಿಬ್ಬೆರಗಾಗುವಂತೆ ಮಾಡಿದ್ದಾರೆ.
ಧಾರವಾಡದ ಬಸವೇಶ್ವರ ಬಡಾವಣೆ, ಶಾಖಾಂಬರಿ ನಗರ, ಗುರುದೇವ ನಗರ, ನಂದಿನಿ ಲೇಔಟ್‌ನ ಜನರು ಲಾಕ್‌ಡೌನ್ ಅವಧಿಯಲ್ಲಿ ಕೆರೆ ನಿರ್ಮಾಣ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 2012ರಿಂದ ಕೆರೆ ನಿರ್ಮಿಸಿ ಕೊಡುವಂತೆ ಸ್ಥಳೀಯರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಾ ಬಂದಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಲಾಕ್‌ಡೌನ್ ಅವಧಿಯಲ್ಲಿ ನಿವಾಸಿಗಳೇ 3 ಲಕ್ಷ ರೂ. ಒಟ್ಟಗೂಡಿಸಿ ಅದರಿಂದ ಕೆರೆ ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ.
ಈ ಕೆರೆಯ ಸ್ಥಳವನ್ನು ಬೇರೆ ಯಾವುದಕ್ಕಾದ್ರೂ ಉಪಯೋಗ ಮಾಡಿಕೊಳ್ಳಬೇಕು ಎಂದು ಬಹಳ ಜನ ಒತ್ತುವರಿ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಸ್ಥಳೀಯರು ಯಾವುದೇ ಕಾರಣಕ್ಕೂ ಕೆರೆಯ ಸ್ಥಳವನ್ನು ಒತ್ತುವರಿಗೆ ಬಿಡದೇ 1 ಎಕರೆ 5 ಗುಂಟೆ ಜಾಗದಲ್ಲಿ ಸುಂದರ ಕೆರೆ ನಿರ್ಮಾಣ ಮಾಡಿಕೊಂಡಿದ್ದಾರೆ.
ಹತ್ತು ದಿನಗಳಲ್ಲಿ ಹಿಟಾಚಿ ಜೊತೆಗೆ ಸ್ಥಳೀಯರ ಶ್ರಮದಾನದ ಮೂಲಕ ಕೆರೆಗೆ ಕಾಯಕಲ್ಪ ನೀಡಿದ್ದಾರೆ. ಉತ್ತಮ ಮಳೆಯಾದ ಕಾರಣಕ್ಕೆ ಸ್ವಲ್ಪ ನೀರು ಕೂಡಾ ಕೆರೆಯಲ್ಲಿ ಸಂಗ್ರಹವಾಗಿದೆ. ಮತ್ತಷ್ಟು ಅಭಿವೃದ್ಧಿಗೊಳಿಸಿ ಇಲ್ಲಿನ ನೀರು ಬಳಕೆ ಮಾಡುವಂತಾಗಬೇಕು ಎಂಬುದು ಸ್ಥಳೀಯರ ಅಪೇಕ್ಷೆ. ಕೋವಿಡ್-19 ತಡೆಯಲು ವಿಧಿಸಲಾಗಿದ್ದ ಲಾಕ್‌ಡೌನ್ ಅವಧಿಯಲ್ಲಿ ಧಾರವಾಡದ ವಿವಿಧ ಬಡಾವಣೆಗಳ ಜನರ ಈ ಸಾಹಸ ನಿಜಕ್ಕೂ ಶ್ಲಾಘನೀಯ.