ಹುಬ್ಬಳ್ಳಿ: ಮಹಾನಗರ ಪಾಲಿಕೆಯ 762 ನೌಕರರ ನೇರ ವೇತನ ಪಾವತಿ ತಾತ್ಕಾಲಿಕ ಪಟ್ಟಿ ಪ್ರಕಟವಾಗಿದ್ದು, ಕೂಡಲೇ ಅಂತಿಮ ಪಟ್ಟಿಯನ್ನು ಪ್ರಕಟಿಸುವಂತೆ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ಪಂಗಡಗಳ ಪೌರಕಾರ್ಮಿಕರ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ ಆಗ್ರಹಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆಕ್ಷೇಪಣೆ ಸಲ್ಲಿಸುವ ಅವಧಿ ಮುಗಿದ 24 ಗಂಟೆಯೊಳಗೆ ಘನತ್ಯಾಜ್ಯ ವಸ್ತು ನಿರ್ವಹಣಾ ಕೇಂದ್ರ ಕಚೇರಿ ಎಸ್‌ಡಬ್ಲೂಎಂ ವಿಭಾಗಕ್ಕೆ ಆಕ್ಷೇಪಣೆ ಸಲ್ಲಿಸಲು ಜೂ. 17ರಂದು ಕಾರ್ಯನಿರ್ವಾಹಕ ಎಂಜಿನಿಯರ್ಗೆ ಪತ್ರ ಬರೆಯಲಾಗಿತ್ತು. ಈ ಬಗ್ಗೆ ಜು. 3ರಂದು ನೆನಪೋಲೆ-1ನ್ನು ಪಾಲಿಕೆಯ ಎಲ್ಲ ವಲಯ ಕಚೇರಿ ಸಹಾಯಕ ಆಯುಕ್ತರಿಗೆ ಪತ್ರ ನೀಡಲಾಗಿದೆ. ಆದರೆ 16 ದಿನಗಳು ಗತಿಸಿದರೂ ಕೇಂದ್ರ ಕಚೇರಿಗೆ ಆಕ್ಷೇಪಣೆಗಳನ್ನು ಕಳುಹಿಸದಿರುವುದು ಗುತ್ತಿಗೆ ಪೌರಕಾರ್ಮಿಕರಲ್ಲಿ ಅನುಮಾನ ಮತ್ತು ಆತಂಕ ಮೂಡಿಸಿದೆ ಎಂದರು.
ಪಾಲಿಕೆಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಎಲ್ಲ ಗುತ್ತಿಗೆ ಪೌರಕಾರ್ಮಿಕರನ್ನು ನೇಮಕಗೊಳಿಸುವವರೆಗೂ ಸಂಘದ ಹೋರಾಟ ಮುಂದುವರೆಯುತ್ತಿದ್ದು, ನೇರ ನೇಮಕಾತಿ/ನೇರ ವೇತನ ಪಾವತಿ ಪ್ರಕ್ರಿಯೆಯಲ್ಲಿ ಪಾಲಿಕೆಯ ವಿಳಂಬ ನೀತಿ ಖಂಡನಾರ್ಹವಾಗಿದೆ ಎಂದರು.