ಹುಬ್ಬಳ್ಳಿ: ಎರಡೆರಡು ಬಾರಿ ಪೊಲೀಸರಿಂದ ತಪ್ಪಿಸಿಕೊಂಡು 8 ಮಂದಿ ಪೊಲೀಸರ ಅಮಾನತು ಮಾಡಿಸಿದ್ದ ಅತ್ಯಾಚಾರ ಆರೋಪಿಯನ್ನು ಕೊನೆಗೂ ಕೇಶ್ವಾಪುರ ಪೊಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಲೆ ಮರೆಸಿಕೊಂಡು ಓಡಾಡುತ್ತಿದ್ದ ಬಸವರಾಜ ಕುರಡಗಿಮಠ 2014ರ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಆದರೆ ಎರಡು ಬಾರಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಇಲಾಖೆಗೆ ಕಪ್ಪು ಚುಕ್ಕೆಯಾಗಿದ್ದ.
48 ವರ್ಷದ ಈತ 2014ರಲ್ಲಿನ ಅತ್ಯಾಚಾರ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ, ಅಲ್ಲಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ವೇಳೆ ನಾಲ್ವರು ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ. ಬಳಿಕ ನಿರಂತರ ಹುಡುಕಾಟ ನಡೆಸಿ ಆತನನ್ನು ಮತ್ತೆ ಬಂಧಿಸಲಾಗಿತ್ತು.
ಇದಾದ ಬಳಿಕ ಮತ್ತೆ ಅನಾರೋಗ್ಯದ ನೆಪದಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಾಗಿ, ಅಲ್ಲಿಂದಲೂ ಪರಾರಿಯಾಗಿದ್ದ, ಆಗಲೂ ನಾಲ್ವರು ಪೊಲೀಸರು ಅಮಾನತುಗೊಂಡಿದ್ದರು.
ಅಂದಿನಿಂದ ತಲೆಮರೆಸಿಕೊಂಡಿದ್ದ ಬಸವರಾಜನನ್ನು ಹುಡುಕುತ್ತಿದ್ದ ಪೊಲೀಸರಿಗೆ ಕಳೆದ ಒಂದು ವರ್ಷದಿಂದಲೂ ಸಿಕ್ಕಿರಲಿಲ್ಲ. ಕೇಶ್ವಾಪುರ ಠಾಣೆಯ ಇನ್ಸಪೆಕ್ಟರ್ ಸುರೇಶ್ ಕುಂಬಾರ ತಂಡ ಮಂಗಳೂರು, ಉಡುಪಿ, ಶಿವಮೊಗ್ಗ ಸೇರಿದಂತೆ ಹಲವೆಡೆ ಹುಡುಕಾಡಿ, ಕೊನೆಗೆ ಮೈಸೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.