ಹುಬ್ಬಳ್ಳಿ: ಸಾಂಪ್ರದಾಯಿಕವಾಗಿ ರಾಷ್ಟ್ರೀಯ ಧ್ವಜವನ್ನು ಖಾದಿಯಿಂದ ತಯಾರು ಮಾಡಲಾಗುತ್ತದೆ. ಅದು ನಿಜಕ್ಕೂ ತುಂಬಾ ಉತ್ತಮ ಕಾರ್ಯ. ಯಾಕೆಂದರೆ, ಅದು ದೇಶದ ಹೆಮ್ಮೆಯನ್ನು ಪ್ರತಿನಿಧಿಸುತ್ತದೆ. ಈ ನಿಟ್ಟಿನಲ್ಲಿ ನಾವು ರಾಷ್ಟ್ರ ಧ್ವಜದ ಪರವಾಗಿದ್ದೇವೆ ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹೇಳಿದರು.
ನಗರದ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಕೆಲಸವನ್ನು ಕಸಿದುಕೊಂಡು ದೊಡ್ಡ ಕುಳಗಳ ಜೇಬಿಗೆ ಹಾಕುವ ಕಾರ್ಯವನ್ನು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮಾಡಲಾಗುತ್ತಿದೆ. ನೋಟು ಅಮಾನ್ಯೀಕರಣ, ಕೃಷಿ ಕಾನೂನು ತಿದ್ದುಪಡಿಯಂತಹ ಯೋಜನೆಗಳ ಮೂಲಕ ಬಡವರಿಂದ ಕಿತ್ತುಕೊಂಡು ಇಬ್ಬರು, ಮೂವರ ಜೇಬು ತುಂಬಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚರಕ ಮಹಾತ್ಮ ಗಾಂಧಿಯವರ ಸಂಕೇತವಾಗಿದ್ದು, ಇಂತಹ ದೇಶದ ಸಂಪ್ರದಾಯದ ಉಳಿವಿಗಾಗಿ ಕಾಂಗ್ರೆಸ್ ಶ್ರಮಿಸುತ್ತಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಇದನ್ನೂ ಓದಿ: 'ಹರ್ ಘರ್ ತಿರಂಗಾ' ಯಶಸ್ವಿಗೆ ಬಿಜೆಪಿ ಸಜ್ಜು.. 75 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜಾರೋಹಣ