ಧಾರವಾಡ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಭತ್ತ ಹಾಗೂ ಹೈಬ್ರೀಡ್ ಮಾಲ್ದಂಡಿ ಜೋಳವನ್ನು ಮಾ. 31ರವರೆಗೆ ಖರೀದಿಸಲಾಗುತ್ತಿದೆ. ಜಿಲ್ಲೆಯ ಕೃಷಿಕರು ತಮ್ಮ ಉತ್ಪನ್ನಗಳನ್ನು ಸಮೀಪದ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಬಹುದು ಎಂದು ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹೈಬ್ರೀಡ್ ಮತ್ತು ಮಾಲ್ದಂಡಿ ಬಿಳಿ ಜೋಳ ಖರೀದಿಗಾಗಿ ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಯ ಟಿಎಪಿಸಿಎಂಎಸ್ ಗೋದಾಮಿನಲ್ಲಿ ಹಾಗೂ ಕುಂದಗೋಳ ತಾಲೂಕಿನ ಯರಗುಪ್ಪಿ ಪಿಎಸಿಎಸ್ ಗೋದಾಮಿನಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಹೈಬ್ರೀಡ್ ಜೋಳವನ್ನು ಪ್ರತಿ ಕ್ವಿಂಟಾಲ್‍ಗೆ 2,620 ರೂ.ಗಳಂತೆ ಹಾಗೂ ಮಾಲ್ದಂಡಿ ಬಿಳಿ ಜೋಳವನ್ನು ಪ್ರತಿ ಕ್ವಿಂಟಾಲ್‍ಗೆ 2,640 ರೂ.ಗಳಂತೆ ಖರೀದಿಸಲಾಗುತ್ತಿದೆ. ಮಾರುಕಟ್ಟೆ ದರಕ್ಕಿಂತ ಕನಿಷ್ಠ ಬೆಂಬಲ ಬೆಲೆಯು ಅಧಿಕವಾಗಿದೆ. ರೈತರು ತಾವು ಬೆಳೆದ ಜೋಳವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬೇಕು. 1 ಲಕ್ಷ ಕ್ವಿಂಟಾಲ್ ಜೋಳ ಖರೀದಿಸಲು ಅವಕಾಶವಿದೆ.
ಓದಿ.. 'ಬಜೆಟ್ನ ತೆರಿಗೆ ಘೋಷಣೆಗಳು ಅಂತಾರಾಷ್ಟ್ರೀಯ ಹಣಕಾಸು ಕ್ಷೇತ್ರದ ಆಕರ್ಷಣೆ'
ಕಲಘಟಗಿ ಮತ್ತು ಅಳ್ನಾವರದ ಎಪಿಎಂಸಿ ಪ್ರಾಂಗಣಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಸಾಮಾನ್ಯ ಹಾಗೂ ಎ ಗ್ರೇಡ್ ಭತ್ತವನ್ನು ಪ್ರತಿ ಕ್ವಿಂಟಾಲ್‍ಗೆ 1,868 ರೂ.ಗಳಂತೆ ಖರೀದಿಸಲಾಗುತ್ತಿದೆ. ಜೋಳ ಹಾಗೂ ಭತ್ತ ಬೆಳೆದ ರೈತರಿಗೆ ಯಾವುದೇ ಗರಿಷ್ಠ ಮಾರಾಟ ಮಿತಿಯನ್ನು ವಿಧಿಸಿಲ್ಲ. ರೈತರು ಕನಿಷ್ಠ ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕೃಷಿ ಸಹಕಾರ ಮಾರಾಟ ಫೆಡರೇಷನ್ ಅಧಿಕಾರಿ - ಮೊ.ಸಂ: 9449864419 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.