ಧಾರವಾಡ: ಧಾರವಾಡ ಡಿಸಿ ಕಚೇರಿ ಮುಂಭಾಗದಲ್ಲಿ ಹೈಡ್ರಾಮಾ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಪಿಎಸ್ಐ ಅಭ್ಯರ್ಥಿಯನ್ನು ಉಪನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಿನ್ನೆ ಸಿಎಂ ಕಾರ್ಯಕ್ರಮದ ವೇಳೆ ಪಿಎಸ್ಐ ಅಭ್ಯರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ಜೊತೆ ವಾಗ್ವಾದ ನಡೆಸಿದ ರವಿಶಂಕರ ಎಂಬಾತ ಪೊಲೀಸರೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅನುಚಿತ ವರ್ತನೆ.. ಪೊಲೀಸರೊಂದಿಗೆ ಅನುಚಿತವಾಗಿ ವರ್ತನೆ ನಡೆಸಿದ ಹಿನ್ನೆಲೆ ಅರೆಸ್ಟ್ ಮಾಡುವಂತೆ ಧಾರವಾಡ ಸಿಟಿ ಎಸಿಪಿ ವಿಜಯಕುಮಾರ್ ಅವರು ಪೊಲೀಸರಿಗೆ ಸೂಚನೆ ನೀಡಿದ್ದರು. ಎಸಿಪಿ ಆದೇಶದ ಮೇಲೆ ಪೊಲೀಸರು ರವಿಶಂಕರ್ನನ್ನು ವಶಕ್ಕೆ ಪಡೆದುಕೊಂಡರು. ಡಿಸಿ ಕಚೇರಿ ಮುಂಭಾಗದಲ್ಲಿ ಪಿಐ ಎಸಿಪಿ ಜತೆಗೆ ರವಿಶಂಕರ್ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಡಿಸಿ ಕಚೇರಿ ಮುಂದೆ ಹೈಡ್ರಾಮಾ.. ಯುವಕನ ವಿರುದ್ಧ ಕೇಸ್ ಹಾಕುವಂತೆ ಎಸಿಪಿ ಅವರು ಸೂಚನೆ ನೀಡಿದರು. ನಿನ್ನೆ ಸಿಎಂ ಧಾರವಾಡಕ್ಕೆ ಬಂದಾಗ ಕೂಡ ಸಿಎಂಗೆ ಕಪ್ಪು ಬಟ್ಟೆ ಪ್ರದರ್ಶನ ಮಾಡಲು ಪಿಎಸ್ಐ ಪರೀಕ್ಷೆ ಅಭ್ಯರ್ಥಿಗಳು ಬಂದಿದ್ದರು. ಆಗಲೂ ಕೂಡ 6 ಜನರನ್ನ ವಶಕ್ಕೆ ಪಡೆದಿದ್ದ ಪೊಲೀಸರು ಆ ಬಳಿಕ ಬಿಡುಗಡೆಗೊಳಿಸಿದ್ದರು. ಇವತ್ತು ಮತ್ತೆ ಡಿಸಿ ಕಚೇರಿಗೆ ಬಂದು ರವಿ ಶಂಕರ್ ಹೈಡ್ರಾಮಾ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಕರೆದೊಯ್ದರು.
ಪೊಲೀಸ್ ಸೇವೆಯನ್ನು ಜನಸ್ನೇಹಿಯಾಗಲು ಕ್ರಮ: ಇನ್ನು ಹುಬ್ಬಳಿಯಲ್ಲಿ ಮಾತನಾಡಿದ ನೂತನ ಪೊಲೀಸ್ ಆಯುಕ್ಯ ರಮಣ್ ಗುಪ್ತಾ, ’’ಹುಬ್ಬಳ್ಳಿ ಮತ್ತು ಧಾರವಾಡ ಮಹಾನಗರ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿ ರೂಪಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’’ ಎಂದು ತಿಳಿಸಿದ್ದಾರೆ. ನವನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈಗಾಗಲೇ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಪೊಲೀಸ್ ಇಲಾಖೆಯಿಂದ ಉತ್ತಮ ಕೆಲಸಗಳು ನಡೆಯುತ್ತಿವೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಅಪರಾಧ ಮತ್ತು ಟ್ರಾಫಿಕ್ ವಿಷಯಕ್ಕೆ ಸಂಬಂಧಿಸಿದಂತೆ ಆಧುನಿಕ ತಂತ್ರಜ್ಞಾನ ಬಳಸಿ ತನಿಖೆಯ ವೇಗ ಹೆಚ್ಚಿಸಲಾಗುವುದು. ಪೆಟ್ರೋಲಿಂಗ್ ಮತ್ತು ಬೀಟ್ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಲು ಪ್ರಯತ್ನಿಸಲಾಗುವುದು. ಕಳೆದ ವರ್ಷ 959 ಪ್ರಕರಣಗಳಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. ರೌಡಿಶೀಟರ್‌ಗಳನ್ನು ಬಂಧಿಸಿ ಬಿಸಿ ಮುಟ್ಟಿಸಲಾಗಿದೆ ಎಂದು ಹೇಳಿದ್ದಾರೆ.
ಗಸ್ತು ವಾಹನಗಳಿಗೆ ತರಬೇತಿ.. ನಮ್ಮ ಪ್ರತಿ ಪೊಲೀಸ್ ಠಾಣೆಗಳಿಗೆ ಬರುವಂತಹ ಜನಸಾಮಾನ್ಯರಿಗೆ ಅದೇ ಸಮಯದಲ್ಲಿ ನಾವು ಏನು ಸಹಾಯ ಮಾಡಬೇಕೋ, ತಕ್ಷಣ ಸ್ಪಂದನೆ ನೀಡಬೇಕು ಎಂಬ ವ್ಯವಸ್ಥೆಯನ್ನು ಚುರುಕಾಗಿ ಮಾಡುತ್ತೇವೆ. ಹೊಯ್ಸಳ ಗಸ್ತು ವಾಹನಗಳು ಒಳ್ಳೆಯ ಕೆಲಸಗಳನ್ನು ನಿರ್ವಹಿಸುತ್ತಿವೆ. ಸಾರ್ವಜನಿಕರಿಗೆ ಉಪಯೋಗವಾಗುವಂತೆ ಇನ್ನೂ ಹೆಚ್ಚು ಗಸ್ತು ವಾಹನಗಳಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮುಲಾಜಿಲ್ಲದೇ ಕಾನೂನು ಕ್ರಮ.. 'ಗಾಂಜಾ, ಅಫೀಮು ಸೇರಿದಂತೆ ಮಾದಕ ವಸ್ತುಗಳ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು. ಸೈಬರ್ ಕ್ರೈಂ, ಅಪರಾಧ ಚಟುವಟಿಕೆಗಳಲ್ಲಿ ಯುವ ಸಮುದಾಯ, ವಿದ್ಯಾರ್ಥಿಗಳು ಭಾಗಿಯಾಗುತ್ತಿರುವ ಹಿನ್ನೆಲೆ ಸಂಘ - ಸಂಸ್ಥೆಗಳ ಸಹಕಾರದೊಂದಿಗೆ ಜಾಗೃತಿ ಕಾರ್ಯಕ್ರಮ ಮಾಡಲಾಗುವುದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ರೀತಿಯಲ್ಲಿ ಯಾರಾದರೂ ವರ್ತಿಸಿದರೆ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಪೊಲೀಸ್ ಆಯುಕ್ತ ರಮಣ್ ಗುಪ್ತ ಎಚ್ಚರಿಕೆ ನೀಡಿದ್ದಾರೆ.
ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಕ್ರಮ: ರಮಣ್ ಗುಪ್ತಾ