ಹುಬ್ಬಳ್ಳಿ: ಪ್ರವಾಹದಿಂದ ಉಂಟಾದ ಹಳೇ ಹುಬ್ಬಳ್ಳಿ ಮೇದಾರ ಓಣಿಯ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಮೇದಾರ ಓಣಿ ಸ್ಥಳೀಯರು ಹಾಗೂ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಸಮಿತಿಯು ಪಾಲಿಕೆಯ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ ವಾರ ಸುರಿದ ಮಳೆಗೆ ಹುಬ್ಬಳ್ಳಿಯ ಮೇದಾರ ಓಣಿಯ ಪಕ್ಕದಲ್ಲಿನ ನಾಲೆಯು ತುಂಬಿ ಹರಿದ ಪರಿಣಾಮ ನಿವಾಸಿಗಳ ಮನೆಗಳಿಗೆ ಕೊಳಚೆ ನೀರು ನುಗ್ಗಿತ್ತು. ಇದರಿಂದಾಗಿ ಮನೆಯಲ್ಲಿದ್ದ ಆಹಾರ ಧಾನ್ಯಗಳು, ಬಟ್ಟೆ, ಪಾತ್ರೆ ಸೇರಿದಂತೆ ಮುಂತಾದ ಸಾಮಗ್ರಿಗಳು ನೀರು ಪಾಲಾಗಿದ್ದವು.
ಸಣ್ಣ ಪುಟ್ಟ ಅಂಗಡಿಗಳ ವ್ಯಾಪಾರದ ವಸ್ತುಗಳು, ಜೀವನಕ್ಕೆ ಆಧಾರವಾಗಿದ್ದ ವೆಲ್ಡಿಂಗ್ ಶಾಪ್ ಮಶಿನ್ಗಳು, ಮೋಟಾರುಗಳು, ಟೇಲರಿಂಗ್ ಮಶಿನ್ಗಳು ನೀರಿನ ಪ್ರವಾಹಕ್ಕೆ ಸಿಲುಕಿ ಜನಗಳ ಬದುಕನ್ನೇ ಕಸಿದುಕೊಂಡಿದೆ. ಇದೀಗ ನೆರೆ ಹಾವಳಿ ಕಡಿಮೆ ಆಗಿದ್ದು ಮನೆಗಳಲ್ಲಿ ಅಗತ್ಯ ಸಾಮಗ್ರಿಗಳು ಇಲ್ಲದಾಗಿದೆ. 15 ದಿನ ಕಳೆಯುತ್ತಾ ಬಂದರು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಅಧಿಕಾರಿಗಳು ಮಾತ್ರ ಜನರ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಕೂಡಲೇ ಅಧಿಕಾರಿಗಳು ಇತ್ತ ಗಮನ ಹರಿಸಿ ಹಾನಿಗೊಳಗಾದ ಜನತೆಗೆ ಪರಿಹಾರ ಒದಗಿಸಬೇಕು. ಅಲ್ಲದೇ ನೆರೆ ಪ್ರವಾಹಕ್ಕೆ ಕಾರಣವಾದ ನಾಲೆಗಳನ್ನ ಸರಿಪಡಿಸಬೇಕೆಂದು ಆಗ್ರಹಿಸಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.