ಹುಬ್ಬಳ್ಳಿ: ಕೊರೊನಾ ವೈರಸ್, ಕೂಲಿ ಕಾರ್ಮಿಕರಿಗೆ ಸಾಕಷ್ಟು ಹೊಡೆತ ನೀಡಿದೆ. ಚಿತ್ರಕಲೆ, ಗುಡಿ ಕೈಗಾರಿಕೆ, ಮಣ್ಣಿನ ಮೂರ್ತಿ ತಯಾರಕರು ಹಾಗೂ ಇತರೆ ಕುಲಕಸುಬುಗಳನ್ನು ನಂಬಿಕೊಂಡು ಜೀವನ ನಡೆಸುತ್ತಿರುವವರಿಗೆ ಇದರಿಂದ ಬಹಳ ತೊಂದರೆಯುಂಟಾಗಿದೆ.
ಕೆಲವೇ ದಿನಗಳಲ್ಲಿ ಗಣೇಶ ಹಬ್ಬ ಬರಲಿದ್ದು ಈ ದಿಸೆಯಲ್ಲಿ ಸರ್ಕಾರ ಗಣೇಶ ಉತ್ಸವಕ್ಕೆ ಮಾರ್ಗಸೂಚಿಯೊಂದಿಗೆ ಸಂಕಷ್ಟದಲ್ಲಿರುವ ಕ್ಷತ್ರಿಯ ಸಮಾಜಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಕ್ಷತ್ರಿಯ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು, ಮೂರ್ತಿಗಳನ್ನೇ ನಂಬಿ ಜೀವನ ಸಾಗಿಸುವವರಿಗೆ ಅನುಕೂಲವಾಗುವಂತೆ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಚಿತ್ರಕಲೆ, ಗುಡಿ ಕೈಗಾರಿಕೆ, ಮಣ್ಣಿನ ಮೂರ್ತಿ ತಯಾರಿಸುವ ಎಷ್ಟೋ ಜನರಿದ್ದಾರೆ. ಇವರಿಗೆ ಈ ಕೆಲಸ ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ. ಮಣ್ಣಿನ ಮೂರ್ತಿಗಳನ್ನು ತಯಾರಿಸುವವರು ಅದರಲ್ಲೂ ಗಣಪತಿ ಮೂರ್ತಿಗಳನ್ನು ತಯಾರಿಸುವವರು ಬಹಳ ಕಷ್ಟಕ್ಕೆ ಸಿಲುಕಿದ್ದಾರೆ. ಇವರ ಜೀವನ ನಿರ್ವಹಣೆಯೇ ಬಹಳ ಕಷ್ಟವಾಗಿದೆ. ಕೆಲವೇ ದಿನಗಳಲ್ಲಿ ಗಣೇಶ ಹಬ್ಬ ಬರಲಿದೆ. ಆದ್ದರಿಂದ ಸರ್ಕಾರ ಮೂರ್ತಿ ತಯಾರಿಕೆಯನ್ನೇ ನಂಬಿಕೊಂಡವರೊಂದಿಗೆ ಗಣೇಶ ಆಚರಣೆ ಬಗ್ಗೆ ಮಾರ್ಗಸೂಚಿಗಳನ್ನು ನೀಡಿ ಜೊತೆಗೆ ಪರಿಹಾರ ಒದಗಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.