ಧಾರವಾಡ: ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ವಾಪಸ್ ಪಡೆಯುವಂತೆ ಆಗ್ರಹಿಸಿ ಎಸ್‌ಯುಸಿಐ ಹಾಗೂ ಆರ್.ಕೆ.ಎಸ್ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಎರಡು ಸಂಘಟನೆಗಳ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿ ದೀಪಾ ಚೋಳನ ಅವರ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಕೊರೊನಾ ವೈರಸ್ ಭೀತಿಯಿಂದಾಗಿ ಮಾಡಲಾದ ಲಾಕ್ಡೌನ್ನಿಂದಾಗಿ ರೈತರು ತತ್ತರಿಸಿರುವಾಗ ಅವರ ನೆರವಿಗೆ ಬರಬೇಕಾದ ರಾಜ್ಯ ಸರ್ಕಾರ, ರೈತರ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳ ಕಪಿಮುಷ್ಟಿಗೆ ನೀಡುವತ್ತ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
ಈ ಕಾಯ್ದೆಯ ತಿದ್ದುಪಡಿಯು ರೈತರಿಗೆ ಮಾರಕವಾಗಿದ್ದು, ಇದನ್ನು ಜಾರಿಗೆ ತರುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಜಾತಂತ್ರ ಮೌಲ್ಯಗಳನ್ನು ಗಾಳಿಗೆ ತೂರಿದೆ. ಈ ಕಾಯ್ದೆಯನ್ನು ಸರ್ಕಾರ ವಾಪಸ್ ಪಡೆಯಲೇಬೇಕು ಎಂದು ಆಗ್ರಹಿಸಿದರು.