ಹುಬ್ಬಳ್ಳಿ: ಹೆಚ್ಚಿನ ಮಳೆಯಿಂದಾಗಿ ನೃಪತುಂಗ ಬೆಟ್ಟ, ಫಾರಸ್ಟ್ ಕಾಲೋನಿಗೆ ಹೊಂದಿಕೊಂಡಿರುವ ಬಾಪೂಜಿ ನಗರದಲ್ಲಿ ಒಳಚರಂಡಿ ಸಮಸ್ಯೆ ಉಂಟಾಗಿದ್ದು, 3 ಕೋಟಿ ವೆಚ್ಚದಲ್ಲಿ ಒಳಚರಂಡಿ ನಿರ್ಮಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಇಲ್ಲಿನ ಬಾಪೂಜಿ ನಗರಕ್ಕೆ ಭೇಟಿ ನೀಡಿದ ಸಚಿವ ಶೆಟ್ಟರ್, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರಿಗೆ ಲೈನ್ ಎಸ್ಟಿಮೇಟ್ ತಯಾರಿಸುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಭಾರತೀಯ ಸೇನೆಗೆ ಸೇರಿದ ಜಾಗದಲ್ಲಿ ಒಳಚರಂಡಿ ಹಾದು ಹೋಗುವುದರಿಂದ, ಅವರ ಒಪ್ಪಿಗೆ ಪಡೆದು ಯೋಜನೆ ರೂಪಿಸಲಾಗುವುದು ಎಂದರು.
ಬಾಪೂಜಿ ನಗರದ ಸಮುದಾಯ ಭವನದ ಮೊದಲ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುದಾನ ಹಾಗೂ ಅಕ್ರಮ-ಸಕ್ರಮದ ಅರ್ಜಿಗಳ ಕುರಿತು ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.