ಧಾರವಾಡ: ಜಿಲ್ಲೆಯಲ್ಲಿ ಸೆಪ್ಟೆಂಬರ್ 2ರಿಂದ ಸೆಪ್ಟೆಂಬರ್ 12ರವರೆಗೆ ಆಚರಿಸುವ ಗಣೇಶ ಹಬ್ಬದ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬರುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21(1) ರನ್ವಯ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ವಿವಿಧ ದಿನಾಂಕಗಳಂದು ಮದ್ಯಪಾನ, ಮದ್ಯ ಮಾರಾಟ ಹಾಗೂ ಮದ್ಯ ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.
ಆದೇಶದಲ್ಲಿ ನಿರ್ದೇಶಿಸಿರುವಂತೆ ಭಾರತೀಯ ತಯಾರಿಕೆಯ ಮದ್ಯದ ಅಂಗಡಿಗಳು, ಬಿಯರ್ ಬಾರ್, ಕ್ಲಬ್‍ಗಳು ಮತ್ತು ಮದ್ಯದ ಡಿಪೋಗಳನ್ನು ಆದೇಶದಲ್ಲಿ ನಿಷೇಧಿಸಿದ ದಿನಾಂಕಗಳಂದು ಸೂಚಿಸಿರುವ ಅವಧಿಯಲ್ಲಿ ಮುಚ್ಚತಕ್ಕದ್ದು. ಇದಲ್ಲದೆ ಪರಿಸ್ಥಿತಿಗೆ ಅನುಗುಣವಾಗಿ ಸಾರ್ವಜನಿಕವಾಗಿ ಶಾಂತಿ ಕಾಯ್ದುಕೊಂಡು ಬರುವ ಸಲುವಾಗಿ ವಲಯ ಅಬಕಾರಿ ಇನ್ಸ್ಪೆಕ್ಟರ್ ಹಾಗೂ ಉಪ ವಿಭಾಗದ ಅಬಕಾರಿ ಅಧೀಕ್ಷಕರು ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21 (2) ರ ಅನ್ವಯ ಅವಶ್ಯಕತೆ ಕಂಡುಬಂದಲ್ಲಿ ಶಾಂತಿ ಪಾಲನೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆದೇಶದಲ್ಲಿ ಅವರು ತಿಳಿಸಿದ್ದಾರೆ.
ಜಿಲ್ಲೆಯ ತಾಲೂಕುಗಳಲ್ಲಿ ಗಣೇಶ ನಿಮಜ್ಜನೆಯ ದಿನಾಂಕಗಳಂದು ಮದ್ಯಪಾನ, ಮದ್ಯ ಮಾರಾಟ ಹಾಗೂ ಮದ್ಯ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಈ ಆದೇಶ ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ಕ್ರಮ ಜರುಗಿಸಬೇಕೆಂದು ದೀಪಾ ಚೋಳನ್ ತಿಳಿಸಿದ್ದಾರೆ.