ಹುಬ್ಬಳ್ಳಿ: ಕೊರೊನಾ ವಿಚಾರದಲ್ಲಿ ಜನರ ಜವಾಬ್ದಾರಿ ಬಹಳಷ್ಟಿದೆ. ಲಾಕ್ ಡೌನ್ ಮುಗಿದಿದೆ ಆದ್ರೂ ಕೊರೊನಾ ಹೋಗಿಲ್ಲ. ಹಾಗಾಗಿ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಜಿಲ್ಲೆಯ ಕೃಷಿ ಚಟುವಟಿಕೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಎಷ್ಟು ಹೆಕ್ಟೇರ್ ಪ್ರದೇಶದಲ್ಲಿ ಯಾವ ಬೆಳೆಗಳನ್ನು ಬೆಳೆಯಲಾಗುತ್ತಿದೆ ಎಂದು ಮಾಹಿತಿ ಪಡೆದರು. ರಸಗೊಬ್ಬರ, ಬೀಜ ಸೇರಿದಂತೆ ಅಧಿಕಾರಿಗಳ ಕುಂದುಕೊರತೆಗಳ ಬಗ್ಗೆ ಚರ್ಚಿಸಿದರು.
ಬಳಿಕ ಮಾತನಾಡಿದ ಅವರು, ಕೊರೊನಾ ವಿಚಾರದಲ್ಲಿ ಸರ್ಕಾರ ಏನ್ ಮಾಡ್ಬೇಕೋ ಅದನ್ನು ಮಾಡ್ತಿದೆ. ಆದ್ರೆ, ಜನ ತಿಳುವಳಿಕೆಯಿಂದ ನಡೆದುಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಭಾನುವಾರ ಲಾಕ್ ಡೌನ್ ಮಾಡಿದ್ದು ಒಳ್ಳೆಯದೇ. ಆದರೆ, ಸಂಪೂರ್ಣ ಲಾಕ್ ಡೌನ್ ಮಾಡಬಾರದು ಎಂದರು.
ಸಂಪುಟ ಸಭೆಯಲ್ಲಿ ಖಾಸಗಿ ಆಸ್ಪತ್ರೆಯ ಕೊರೊನಾ ಚಿಕಿತ್ಸೆಗೆ ದರ ನಿಗದಿ ಮಾಡಲಾಗಿದೆ. ಅವರು ಸಹಕರಿಸಬೇಕು, ಇಲ್ಲವಾದ್ರೆ ಬಲ ಪ್ರಯೋಗ ಮಾಡಬೇಕಾಗುತ್ತೆ ಎಂದು ಖಾಸಗಿ ಆಸ್ಪತ್ರೆ ವೈದ್ಯರಿಗೆ ಎಚ್ಚರಿಕೆ ನೀಡಿದರು.
ಇದೇ ವೇಳೆ ಡಿ.ಕೆ. ಶಿವಕುಮಾರ್ ಪ್ರತಿಜ್ಞಾ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷದವರು ಅವರ ಕಾರ್ಯಕ್ರಮ ಮಾಡಿಕೊಳ್ಳಲಿ, ಏನು ಸಮಸ್ಯೆಯಿಲ್ಲ. ಕಾನೂನು ಚೌಕಟ್ಟಿನಲ್ಲಿ ಮಾಡಿದರೆ ಒಳಿತು ಎಂದು ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ಸೋಯಾಬಿನ್ ಬಿತ್ತನೆ ಬೀಜದ ಬಗ್ಗೆ ಸಾಕಷ್ಟು ತೊಂದರೆಯಾಗಿದೆ. ಯಾವುದೇ ಕಂಪನಿಯ ಬೀಜ ಇರಲಿ, ಬೀಜ ಮೊಳಕೆಯೊಡೆಯದ ರೈತರಿಗೆ ಪರಿಹಾರ ನೀಡಲು ಸೂಚಿಸಿದ್ದೇನೆ. ಯಾವುದೇ ಕಂಪನಿ ಇರಲಿ, ಎಲ್ಲರೂ ಪರಿಹಾರ ನೀಡಲೇಬೇಕು. ಗೊಬ್ಬರ ಸಮಸ್ಯೆಯಿಲ್ಲ, ಸಾಕಷ್ಟು ದಾಸ್ತಾನು ಇದೆ ಎಂದು ರೈತರಿಗೆ ಅಭಯ ನೀಡಿದರು.