ಹುಬ್ಬಳ್ಳಿ: ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಗಾಂಧಿ ಕುಂದಗೋಳದಲ್ಲಿ ರೋಡ್ ಶೋ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರವಾಗಿ ಪ್ರಚಾರ ನಡೆಸಿದರು. ಹೆಲಿಕಾಪ್ಟರ್ ಮೂಲಕ ಕುಂದಗೋಳಕ್ಕೆ ಆಗಮಿಸಿದ ಪ್ರಿಯಾಂಕಾ ಗಾಂಧಿ ನೇರವಾಗಿ ಹೆಲಿಪ್ಯಾಡ್ ಸುತ್ತುವರಿದಿದ್ದ ಜನರತ್ತ ಹೋಗಿ ಕೈ ಕುಲುಕಿದರು. ನಂತರ ಪ್ರಚಾರದ ವಾಹನ ಏರಿದ ಅವರು ಹುಬ್ಬಳ್ಳಿ - ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಜೆ.ಎಸ್.ಎಸ್. ವಿದ್ಯಾಪೀಠದಿಂದ ರೋಡ್ ಶೋ ಪ್ರಾರಂಭಿಸಿದರು.
ಕರ್ನಾಟಕದ ಭವಿಷ್ಯಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಈ ವೇಳೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಜಾನಪದ ಕಲಾ ತಂಡಗಳು ರೋಡ್ ಶೋಗೆ ಮೆರುಗು ತಂದವು. ಪ್ರಿಯಾಂಕಾ ಗಾಂಧಿ ರೋಡ್ ಶೋ ಉದ್ದಕ್ಕೂ ಅಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರು ನೆಚ್ಚಿನ ನಾಯಕಿಗೆ ಹೂಮಳೆ ಸುರಿದು ಸ್ವಾಗತ ಕೋರಿದರು. ನಂತರ ಮಾತನಾಡಿದ ಅವರು, ಕರ್ನಾಟಕದ ಭವಿಷ್ಯಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ. ಕರ್ನಾಟಕದಲ್ಲಿ ಈಗ ಚುನಾವಣೆ ಇದೆ, ಆದ್ದರಿಂದ ಎಲ್ಲರೂ ನಿಮ್ಮ ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು. ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಏನೂ ಮಾಡಿಲ್ಲ. ನಾಲ್ಕು ವರ್ಷದಲ್ಲಿ ಬಿಜೆಪಿ ಏನೂ ಮಾಡಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.
ಈ ಚುನಾವಣೆ ನಿಮ್ಮ ಮಕ್ಕಳ ಭವಿಷ್ಯ ರೂಪಿಸುವಂತಹ ಚುನಾವಣೆ: ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಿಯಾಂಕಾ ಗಾಂಧಿ, ಬೆಲೆ ಏರಿಕೆಯಿಂದ ಜನ ತತ್ತಿರಿಸಿದ್ದಾರೆ. ತತ್ತರಿಸಿ ಹೋದ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಕೊಡುತ್ತಿದೆ. ಮಹಿಳೆಯರಿಗೆ 2000 ಸಾವಿರ ರೂಪಾಯಿ ಗ್ಯಾರಂಟಿ ಕಾರ್ಡ್ ಕೋಡ್ತಾ ಇದ್ದೇವೆ. ಈ ಸರ್ಕಾರದಲ್ಲಿ ಎಷ್ಟು ಜನ ಯುವಕರಿಗೆ ಉದ್ಯೋಗ ಸಿಕ್ಕಿದೆ? ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರದಲ್ಲಿ 2.5 ಲಕ್ಷ ಉದ್ಯೋಗಗಳು ಖಾಲಿ ಇವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅಲ್ಲಿಯವರೆಗೂ ನಿರುದ್ಯೋಗ ಯವತಿ ಯುವಕರಿಗೆ ಪದವಿ ಪಡೆದವರಿಗೆ 3 ಸಾವಿರ, ಡಿಪ್ಲೋಮಾ ಪಡೆದವರಿಗೆ 1500 ಸಾವಿರ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ ಎಂದು ಹೇಳಿದರು.
ಈ ಚುನಾವಣೆ ನಿಮ್ಮ ಮಕ್ಕಳ ಭವಿಷ್ಯ ರೂಪಿಸುವಂತಹ ಚುನಾವಣೆ. ಈ ಎಲೆಕ್ಷನ್ ನಿಮ್ಮ ಭವಿಷ್ಯ ನಿರ್ಮಾಣ ಮಾಡುವ ಚುನಾವಣೆಯಾಗಿದೆ. ಕಾಂಗ್ರೆಸ್ ಪಕ್ಷ ಅನ್ನಭಾಗ್ಯ ಮತ್ತು ಕ್ಷೀರಭಾಗ್ಯ ಯೋಜನೆಗಳನ್ನು ಮತ್ತೆ ಆರಂಭ ಮಾಡಲಿದ ಎಂದು ಭರವಸೆ ನೀಡಿದ್ರು. ನಮ್ಮ ಪಕ್ಷ ನಿಮಗಾಗಿ ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ, ಕುಸುಮಾವತಿ ಶಿವಳ್ಳಿಗೆ ಅತಿ ಹೆಚ್ಚು ಮತ ಕೊಟ್ಟು ಗೆಲ್ಲಿಸಿಕೊಂಡು ಬನ್ನಿ. ಕನ್ನಡದ ಭವಿಷ್ಯಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದು ಜನರಲ್ಲಿ ಪ್ರಿಯಾಂಕಾ ಗಾಂಧಿ ಮನವಿ ಮಾಡಿದರು.
ಇದನ್ನೂ ಓದಿ:ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿಯನ್ನು ಕರೆಸಿ ದೋಸೆ ಮಾಡಿಸಿದರೆ ಜನ ಮತ ಹಾಕಲ್ಲ: ಅಣ್ಣಾಮಲೈ ವ್ಯಂಗ್ಯ