ಧಾರವಾಡ: ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಆದ್ರೆ ಸಾರ್ವಜನಿಕರ ಜವಾಬ್ದಾರಿ ಜಾಸ್ತಿ ಇದೆ ಎಂದು ಧಾರವಾಡದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ಧಾರವಾಡಕ್ಕೆ ದಿಢೀರ್ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರೋಗ ತಡೆಗಟ್ಟುವುದು ಸಾರ್ವಜನಿಕರ ಕೈಯಲ್ಲಿದೆ. ರಾಜ್ಯದಲ್ಲಿ ಕೋವಿಡ್ ಹೆಚ್ಚಾಗುತ್ತಿದೆ. ಹೊರಗಡೆಯಿಂದ ಬಂದವರಿಂದ, ವಲಸೆ ಕಾರ್ಮಿಕರಿಂದ, ಅವರೆಲ್ಲರು ಹೊರಗಡೆ ಓಡಾಡುತ್ತಿರುವುದರಿಂದ ಹೆಚ್ಚಾಗುತ್ತಿದೆ ಎಂದರು.
ಕೇಂದ್ರ ಸರ್ಕಾರ ನವೆಂಬರ್ವರೆಗೂ ರೇಷನ್ ಹಂಚಿಕೆ ವಿಚಾರಕ್ಕೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ದಾರರಿಗೆ ತೊಂದರೆಯಾಗಬಾರದು ಎಂದು ರೇಷನ್ ನೀಡುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.
ಲಾಕ್ಡೌನ್ ಮಾಡುವ ಬಗ್ಗೆ ಯಾವುದೆ ಚರ್ಚೆಯಾಗಿಲ್ಲ. ಸರ್ಕಾರದ ಎದುರು ಪ್ರಸ್ಥಾವನೆ ಇಲ್ಲ ಎಂದು ಲಾಕ್ಡೌನ್ ವಿಚಾರ ತಳ್ಳಿ ಹಾಕಿದರು.
ಸರ್ಕಾರದ ವಿಫಲತೆ ಎಂದು ವಿರೋಧ ಪಕ್ಷದ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದವರು ಹೊಗಳಿದ್ದನ್ನು ನೋಡಿದ್ದೇವೆ, ತೆಗಳಿದ್ದನ್ನೂ ನೋಡಿದ್ದೇವೆ ಈಗ ಹೀಗೆ ಹೇಳಿದ್ರೆ ಎನು ಹೇಳುವುದು. ರೋಗ ತಡೆಗಟ್ಟುವುದು ಜನರ ಕೈಯಲ್ಲಿದೆ ಎಂದರು.