ಹುಬ್ಬಳ್ಳಿ: ನಾನು ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಇರಲಿಲ್ಲ. ಆದರೆ ಯಾರೂ ಸಹ ಬಹಿರಂಗ ಹೇಳಿಕೆಗಳನ್ನು ನೀಡಬಾರದು. ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ, ಅದನ್ನು ನಿಲ್ಲಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಆಗ್ತಿರುವ ಡ್ಯಾಮೇಜ್ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು. ಪಕ್ಷದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಸರ್ಕಾರದ ವಿರುದ್ಧ ಮಾತನಾಡುತ್ತಿದ್ದ ಶಾಸಕರಿಗೆ ವಿಶೇಷ ಸ್ಥಾನಮಾನ ವಿಚಾರಕ್ಕೆ ಮಾತನಾಡಿದ ಜೋಶಿ, "ಈಶ್ವರಪ್ಪ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಯಾವುದೋ ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಬಂದಿದ್ದರು. ನನ್ನನ್ನು ಭೇಟಿಯಾಗಿ ವಾಪಸ್ ಆಗಿದ್ದಾರೆ. ಈಶ್ವರಪ್ಪ ಮಗ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಓಡಾಡ್ತಿದ್ದಾನೆ. ಟಿಕೆಟ್ ವಿಷಯವನ್ನು ನಾವು ಮತ್ತು ಅವರು ಕೂತು ತೀರ್ಮಾನ ಮಾಡೋಕೆ ಆಗಲ್ಲ" ಎಂದರು.
ಸರ್ಕಾರದ ವಿರುದ್ಧ ಮಾತನಾಡುತ್ತಿದ್ದ ಶಾಸಕರಿಗೆ ವಿಶೇಷ ಸ್ಥಾನಮಾನ ವಿಚಾರದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಿಎಂ ವಿರುದ್ಧ ಮಾತನಾಡಿದರೆ ವಿಶೇಷ ಸ್ಥಾನಮಾನ ಸಿಗುತ್ತೆ ಅಂತ ಖಾತ್ರಿ ಆಯ್ತು. ಕೆಲವರಿಗೆ ನೀಡಿದ ವಿಶೇಷ ಸ್ಥಾನಮಾನ ನೀಡಿದ್ದಾರೆ. ಸಿಎಂಗೆ ಬೈದರೆ ಒಂದು ಸ್ಥಾನಮಾನ ಸಿಗುತ್ತೆ ಅನ್ನೋದನ್ನು ಸಿದ್ದರಾಮಯ್ಯ ಸಾಬೀತು ಮಾಡಿದ್ದಾರೆ. ಮುಂದೆ ಯಾರ್ಯಾರಿಗೆ ಏನೇನು ಸ್ಥಾನಮಾನ ಕೊಡ್ತಾರೋ ನೋಡಬೇಕು ಎಂದು ಜೋಶಿ ವ್ಯಂಗ್ಯವಾಡಿದರು.
ಈಶ್ವರಪ್ಪ ಮಗ ಒಳ್ಳೆಯ ಕಾರ್ಯಕರ್ತ. ಕಳೆದ ಚುನಾವಣೆಯಲ್ಲಿ ಟಿಕೆಟ್ ಕೊಟ್ಟಿಲ್ಲ ಅಂತ ಅನೇಕರು ಪಕ್ಷ ಬಿಟ್ಟಾಗಲು, ಈಶ್ವರಪ್ಪ ಇಲ್ಲಿಯೇ ಉಳಿದಿದ್ದಾರೆ. ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಇದೀಗ ಅವರ ಪುತ್ರ ಲೋಕಸಭೆ ಚುನಾವಣೆ ತಯಾರಿ ಮಾಡ್ತಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಆದರೆ ಟಿಕೆಟ್ ವಿಚಾರವಾಗಿ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ" ಎಂದು ತಿಳಿಸಿದರು.
ಕುತೂಹಲಕ್ಕೆ ಕಾರಣವಾದ ಈಶ್ವರಪ್ಪ ನಡೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸಕ್ಕೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ ಸಾಕಷ್ಟು ಗಮನ ಸೆಳೆದಿದೆ. ಈ ನಡುವೆ ಜೋಶಿಯವರ ಪಾದಕ್ಕೆ ಈಶ್ವರಪ್ಪ ನಮಸ್ಕರಿಲು ಮುಂದಾಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈಶ್ವರಪ್ಪ ನಮಸ್ಕರಿಸಲು ಭಾಗುತ್ತಿದ್ದಂತೆಯೇ ಜೋಶಿಯವರು ಹಿಂದೆ ಸರಿದಿದ್ದಾರೆ. ಸ್ವಾಮೀಜಿಗಳಿಗೆ ನಮಸ್ಕಾರ ಮಾಡುವ ವೇಳೆಯಲ್ಲೇ ಜೋಶಿಯವರ ಪಾದಕ್ಕೆ ನಮಸ್ಕಾರ ಮಾಡಲು ಈಶ್ವರಪ್ಪ ಮುಂದಾಗಿದ್ದರು.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಈಶ್ವರಪ್ಪ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದು, ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಯತ್ನಾಳ್ ಆರೋಪದ ಸತ್ಯಾಂಶಕ್ಕೆ ಬಿಜೆಪಿ ಬೆದರಿದೆ: ಎಂ.ಬಿ.ಪಾಟೀಲ್