ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಟ್ಯಾಂಡ್ ಇಲ್ಲ. ಅವರ ಸ್ಟ್ಯಾಂಡ್ ಅಂದ್ರೆ ಬಸ್ಟ್ಯಾಂಡ್ ಇದ್ದ ಹಾಗೆ. ಯಾರು ಏನು ಬೇಕಾದರೂ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ನವರು ಮಧ್ಯಪ್ರದೇಶದಲ್ಲಿ ಹನುಮಾನ್ ಚಾಲೀಸ್ ಮಾಡೋಕೆ ಹೋದರು. ರಾಹುಲ್ ಗಾಂಧಿ ಬ್ರಾಹ್ಮಣ ಎಂದು ಜನಿವಾರ ಧರಿಸಿದರು. ಸಿದ್ದರಾಮಯ್ಯ 10 ಸಾವಿರ ಕೋಟಿ ರೂ ಕೊಡ್ತೀನಿ ಅಂತಾರೆ, ಮನಮೋಹನ್ ಸಿಂಗ್ ಬಜೆಟ್‌ನಲ್ಲಿ ಮುಸಲ್ಮಾನರಿಗೆ ಹಕ್ಕಿದೆ ಅಂತಾರೆ. ಇವರು ಮುಸಲ್ಮಾನರನ್ನು ತಪ್ಪು ದಾರಿಗೆ ಎಳೆದೊಯ್ಯುವುದು ಗೊತ್ತಾಗುತ್ತಿದೆ. ಏಕೆಂದರೆ ಎಲ್ಲಿಯೂ ಹಿಜಾಬ್ ಬ್ಯಾನ್ ಇಲ್ಲ. ಈ ಬಗ್ಗೆ ಮಾಧ್ಯಮದವರು ಕೂಡಾ ಸರಿಯಾಗಿ ಪರಾಮರ್ಶೆ ಮಾಡಬೇಕು ಎಂದರು.
ವಸ್ತ್ರ ಸಂಹಿತೆ ಬಿಟ್ಟು ಹಿಜಾಬ್ ಹಾಕ್ತೀನಿ ಅಂದ್ರೆ ನಾಳೆ ಮತ್ತೊಬ್ಬರು ಕೇಸರಿ ಶಾಲು ಹಾಕ್ಕೊಂಡು ಬರ್ತೀನಿ ಅಂತಾರೆ. ಸಿದ್ದರಾಮಯ್ಯ ಏನು ಮಾಡೋಕೆ ಹೊರಟಿದ್ದೀರಿ? ಈ ರೀತಿ ಹೇಳಿಕೆ ಕೊಡ್ತಿರೋದು, ಸಮಾಜ ಒಡೆದು ವೋಟ್ ತೆಗೆದುಕೊಳ್ಳಲೋ ಎಂದು ಪ್ರಶ್ನಿಸಿದರು.
ಕರ್ನಾಟಕ, ಹಿಮಾಚಲ ಪ್ರದೇಶ ಹಾಗು ತೆಲಂಗಾಣದಲ್ಲಿ ಮಾತ್ರ ನೀವು ಅಧಿಕಾರದಲ್ಲಿರೋದು. ಇದು ನಿಮ್ಮ ಪರಿಸ್ಥಿತಿ. ನೀವು ಹೀಗೇ ಮಾತನಾಡುತ್ತಿದ್ದರೆ ಜನ ಇತಿಹಾಸದಲ್ಲೇ ಕಾಂಗ್ರೆಸ್ ಪಕ್ಷವನ್ನು ಕಸದ ಬುಟ್ಟಿಗೆ ಸೇರಿಸ್ತಾರೆ, ನೆನಪಿಟ್ಟುಕೊಳ್ಳಿ. ಸಿದ್ದರಾಮಯ್ಯ ತಮ್ಮ ವೈಫಲ್ಯ ಮುಚ್ಚಲು ಈ ರೀತಿಯ ವಿವಾದ ಹುಟ್ಟ ಹಾಕುತ್ತಾರೆ. ನಾವೇನಾದರೂ ಹಿಜಾಬ್ ವಿಷಯ ಎತ್ತಿದ್ವಾ? ಬಹುತೇಕ ಇಸ್ಲಾಂ ದೇಶಗಳಲ್ಲಿ ಹಿಜಾಬ್ ಹಾಕಲ್ಲ. ನಿಮಗ್ಯಾಕೆ ಈ ಕೆಟ್ಟ ವಿಚಾರ? ಎಂದು ವಾಗ್ದಾಳಿ ನಡೆಸಿದರು.
ಸಚಿವ ಶಿವಾನಾಂದ ಪಾಟೀಲ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರದು ಅತ್ಯಂತ ಬೇಜವಾಬ್ದಾರಿ ಹೇಳಿಕೆ. ದೊಡ್ಡ ಸ್ಥಾನದಲ್ಲಿದ್ದವರು ಹೀಗೆ ಮಾತನಾಡಬಾರದು. ಸರ್ಕಾರ ಬರಗಾಲದಲ್ಲಿ ಪರಿಹಾರ ನೀಡುತ್ತದೆ. ರೈತರಿಗೆ ಮಳೆ, ಬೆಳೆ ಸಮೃದ್ಧವಾಗಿದ್ದರೆ ಅವರು ಯಾರ ಹತ್ತಿರವೂ ಕೈ ಚಾಚುವುದಿಲ್ಲ. ಶಿವಾನಂದ ಪಾಟೀಲ್ ತಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಸ್ವತಂತ್ರ ಧರ್ಮದ ಬಗ್ಗೆ ಹೋರಾಟ ಮಾಡಲು ನಾನೇ ಹೇಳಿದ್ದೆ- ಜಗದೀಶ್ ಶೆಟ್ಟರ್: ಎಲ್ಲರೂ ಸೇರಿ ಸ್ವತಂತ್ರ ಧರ್ಮದ ಬಗ್ಗೆ ಹೋರಾಟ ಮಾಡಿ ಎಂದು ನಾನೇ ಹೇಳಿದ್ದೆ. ಮನೆ ಒಡೆಯುವಂಥ ಕೆಲಸ ಯಾರೂ ಮಾಡಬಾರದು ಎಂಬ ಬಿ.ವೈ.ವಿಜಯೇಂದ್ರರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಈ ರೀತಿ ತಿರುಗೇಟು ನೀಡಿದರು.
ನಗರದಲ್ಲಿಂದು ಮಾತನಾಡಿದ ಅವರು, ಪ್ರತ್ಯೇಕ ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಒಡಕು ಉಂಟಾಗುವ ಕೆಲಸ ಆಗಬಾರದು ಎಂದು ಹಿಂದೆಯೂ ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ದಾವಣಗೆರೆ ಸಮಾವೇಶದಲ್ಲೂ ಕೆಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂದರು.
ಸಚಿವ ಶಿವಾನಂದ ಪಾಟೀಲರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ, ಯಾರೋ ಒಬ್ಬರು ನೀಡಿದ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅದನ್ನು ಅವರೇ ಹೇಳಲಿ ಎಂದರು. ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ಅವರ ಟೀಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ವೈಯಕ್ತಿಕ ಹೇಳಿಕೆಗಳನ್ನು ಅವರೇ ವಿವರಿಸಿಕೊಳ್ಳುತ್ತಾರೆ. ನಾನೇಕೆ ಎಲ್ಲದಕ್ಕೂ ಉತ್ತರಿಸಲಿ? ಎಂದರು. ಇನ್ನು, ಲೋಕಸಭಾ ಚುನಾವಣಾ ಅಖಾಡದಲ್ಲಿ 8ರಿಂದ 10 ಜನ ಸಚಿವರನ್ನು ಇಳಿಸುವ ವಿಚಾರ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚೆಯೇ ಆಗಿಲ್ಲ ಎಂದು ಶೆಟ್ಟರ್ ತಿಳಿಸಿದರು.
ಇದನ್ನೂ ಓದಿ: ಹಿಜಾಬ್ ನಿಷೇಧ ವಾಪಸ್ ನಮ್ಮ ಪಕ್ಷದ ನಿಲುವು: ಸಚಿವ ಸತೀಶ್ ಜಾರಕಿಹೊಳಿ