ಧಾರವಾಡ: ಜಿಲ್ಲೆಯಲ್ಲಿ ಮಳೆ ಎನ್ನುವುದು ರೈತರಿಗೆ ಬಹಳ ತೊಂದರೆ ಉಂಟು ಮಾಡುತ್ತಿದೆ. ಸತತ ಬರಗಾಲದಿಂದ ಬೇಸತ್ತಿದ್ದ ಧಾರವಾಡದ ರೈತರು ಇದೀಗ ಸುರಿದ ಮಳೆಗೆ ಬೇಸತ್ತು ಹೋಗಿದ್ದಾರೆ. ಅದರಲ್ಲೂ ಕೆಲ ತೋಟಗಾರಿಕೆ ಬೆಳೆ ಬೆಳೆದ ರೈತರ ಪಾಡಂತೂ ದೇವರೇ ಬಲ್ಲ ಎಂಬಂತಾಗಿದೆ ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.
ಆಲೂಗಡ್ಡೆ ಬೆಳೆದು ಸಂಕಷ್ಟದಲ್ಲಿರುವ ರೈತನ ಹೆಸರು ಭೀಮಣ್ಣ ತಳಗೇರಿ. ಇವರು ಧಾರವಾಡದ ಕಮಲಾಪೂರ ನಿವಾಸಿ. ಇವರು ಹೊಲದಲ್ಲಿ ಬೆಳೆದ ಆಲೂಗಡ್ಡೆ ಸಂಪೂರ್ಣವಾಗಿ ಕೊಳೆತು ಹೋಗಿದೆ. ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ.
ತಮ್ಮ 15 ಎಕರೆ ಜಮೀನಿನಲ್ಲಿ ಆಲೂಗಡ್ಡೆ ಬೆಳೆದಿದ್ದ ಭೀಮಣ್ಣ ಇದೀಗ ಆಲೂಗಡ್ಡೆ ಯಾಕಾದರೂ ಜಮೀನಿಗೆ ಬಿತ್ತನೆ ಮಾಡಿದೇನೋ ಎನ್ನುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಎರಡು ತಿಂಗಳ ಹಿಂದೆ ಸುರಿದ ಬಾರೀ ಮಳೆ ಅನಾಹುತ ಸೃಷ್ಟಿ ಮಾಡಿ ಸುಮ್ಮನಾಗಿತ್ತು. ಆದ್ರೆ ಇದೀಗ ಆವಾಗೊಮ್ಮೆ ಇವಾಗೊಮ್ಮೆ ಆಗುತ್ತಿರುವ ಮಳೆಯಿಂದ ಆಲೂಗಡ್ಡೆಗೆ ತಂಪು ಹಿಡಿದು ಇಡೀ ಹೊಲದಲ್ಲಿನ ಆಲೂಗಡ್ಡೆ ಕೊಳೆತು ಹೋಗುತ್ತಿರುವುದು ರೈತ ಭೀಮಣ್ಣನನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.
ಜಿಲ್ಲೆಯಲ್ಲಿ ಒಟ್ಟು 1,300 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗಿತ್ತು. ಧಾರವಾಡ ತಾಲೂಕಿನ ತಡಕೋಡ, ಹಂಗರಕಿ, ನರೇಂದ್ರ ಲಕಮಾಪೂರ ಹಾಗೂ ಕುಂದಗೋಳ ನವಲಗುಂದ ಭಾಗದಲ್ಲಿ ಹೆಚ್ಚು ಬೆಳೆಯಲಾಗುತ್ತೆ. ಹೀಗೆ ಆಲೂ ಬೆಳೆದು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರ ಆಸೆಗೆ ತಣ್ಣೀರು ಎರಚಿದಂತಾಗಿದೆ.
ಒಟ್ಟಿನಲ್ಲಿ ಇಷ್ಟು ವರ್ಷ ಬರಕ್ಕೆ ತುತ್ತಾಗಿದ್ದ ರೈತರಿಗೆ ಇದೀಗ ಬಾರಿ ಮಳೆ ಆಘಾತ ನೀಡಿದೆ. ಅದರಲ್ಲೂ ಜಿಲ್ಲೆಯ ಪ್ರಮುಖ ಬೆಳೆಯಾದ ಆಲೂಗಡ್ಡೆ ಈ ಬಾರೀ ಕೈಕೊಟ್ಟಿದೆ. ಇದರಿಂದಾಗಿ ಸಾವಿರಾರುವ ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನುವಂತಾಗಿದೆ. ಮಳೆ ಬರಲಿ ಬರದೇ ಇರಲಿ ರೈತ ಮಾತ್ರ ಕಣ್ಣೀರಲ್ಲಿ ಕೈ ತೊಳೆಯುವುದು ಮಾತ್ರ ತಪ್ಪಿಲ್ಲ ಆದ್ರೆ ಇದೀಗ ಸರ್ಕಾರ ಇತ್ತ ಕಡೆ ಗಮನವಹಿಸಿ ಪರಿಹಾರ ಕೊಟ್ಟು ರೈತರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ.