ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೆಟ್ನಲ್ಲಿ ಪೊಲೀಸ್ ಸಿಬ್ಬಂದಿ ವರ್ಗಾವಣೆ ಪರ್ವವೇ ಶುರುವಾಗಿದೆ. ಕಳೆದ ಐದು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿದ್ದ ಸಿಬ್ಬಂದಿಗೆ ಗೇಟ್ಪಾಸ್ ನೀಡಲಾಗಿದೆ. ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿರುವ ವಿವಿಧ ಪೊಲೀಸ್ ಠಾಣೆಗಳಲ್ಲಿ ಐದಕ್ಕಿಂತ ಹೆಚ್ಚು ವರ್ಷ ಕರ್ತವ್ಯ ನಿರ್ವಹಿಸಿದ 170 ಸಿಬ್ಬಂದಿಯನ್ನು ಆಂತರಿಕ ವರ್ಗಾವಣೆ ಮಾಡಲಾಗಿದೆ.
ಪೊಲೀಸ್ ಕಮಿಷನರ್ ರಮಣ್ ಗುಪ್ತಾ, ಡಿಸಿಪಿ ರಾಜೀವ್ ಎಂ. ಮತ್ತು ಗೋಪಾಲ ಬ್ಯಾಕೋಡ ಸಮ್ಮುಖದಲ್ಲಿ ಸಿಬ್ಬಂದಿಯ ವರ್ಗಾವಣೆ ಪ್ರಕ್ರಿಯೆ ನಡೆದಿದ್ದು, 10 ಮಂದಿ ಎಎಸ್‌ಐ ಸೇರಿ 262 ಸಿಬ್ಬಂದಿ ಹೆಸರನ್ನು ವರ್ಗಾವಣೆ ಪಟ್ಟಿಯಲ್ಲಿ ನಮೂದಿಸಲಾಗಿತ್ತು. ಏಕಕಾಲಕ್ಕೆ ಎಲ್ಲಾ ಸಿಬ್ಬಂದಿಯ ವರ್ಗಾವಣೆ ಮಾಡಿದರೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಸದ್ಯಕ್ಕೆ 5 ವರ್ಷ 9 ತಿಂಗಳು ಮಾತ್ರ ಕರ್ತವ್ಯ ನಿರ್ವಹಿದ 170 ಸಿಬ್ಬಂದಿಯನ್ನಷ್ಟೇ ವರ್ಗಾವಣೆ ಮಾಡಲಾಗಿದೆ.
ಇನ್ನು ಧಾರವಾಡದ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಯನ್ನು ಹುಬ್ಬಳ್ಳಿ ಠಾಣೆಗಳಿಗೆ, ಸಂಚಾರ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಯನ್ನು ಸಿವಿಲ್ ಠಾಣೆಗಳಿಗೆ ವರ್ಗಾವಣೆ ಮಾಡಿದ್ದು, ಹಿರಿತನದ ಆಧಾರದ ಮೇಲೆ ಕೆಲವೇ ಸಿಬ್ಬಂದಿಗೆ ಅಕ್ಕಪಕ್ಕದ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ರಮಣ್ ಗುಪ್ತಾ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲೂ ವರ್ಗಾವಣೆ: ಮಂಗಳೂರು ಕಮಿಷನರೆಟ್ ವ್ಯಾಪ್ತಿಗೆ ಬರುವ ಉಳ್ಳಾಲ ಪೊಲೀಸ್ ಠಾಣೆಯ 14 ಸಿಬ್ಬಂದಿ ಹಾಗೂ ಕೊಣಾಜೆ ಠಾಣೆಯ 7 ಸಿಬ್ಬಂದಿಯನ್ನು ವರ್ಗಾಯಿಸಿ ಪೊಲೀಸ್ ಆಯುಕ್ತರ ಕಚೇರಿ ಆದೇಶ ಹೊರಡಿಸಿದೆ.
ಸಿಹೆಚ್‌ಸಿ ಕೊಣಾಜೆಯ ರವಿಚಂದ್ರ ಅವರನ್ನು ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಹಾಗೂ ಉಳ್ಳಾಲದ ಪ್ರವೀಣ್ ಶೆಟ್ಟಿ ಡಿ.ಬಿ ಇವರನ್ನು ಮಂಗಳೂರು ಪೂರ್ವ ಸಂಚಾರಿ ಠಾಣೆ ಹಾಗೂ ಸಿಪಿಸಿ ಕೊಣಾಜೆಯ ಅನಿಲ್ ಕುಮಾರ್ ಅವರನ್ನು ದಕ್ಷಿಣ ಸಂಚಾರಿ ಠಾಣೆ, ಉಳ್ಳಾಲದ ಅಕ್ಬರ್ ಯದ್ರಾಮಿ ಅವರನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ, ಉಳ್ಳಾಲದ ರವಿ ಬಿಲ್ಲೂರು ಇವರನ್ನು ಬಜಪೆ ಠಾಣೆ, ಕೊಣಾಜೆಯ ಚಂದ್ರಕಾಂತ್, ಅನಿಲ್ ಕುಮಾರ ವೈ.ಎಂ ಬಜಪೆ ಠಾಣೆ, ಉಳ್ಳಾಲದ ಮಾಣಿಕ್ ಪಣಂಬೂರು ಠಾಣೆಗೆ, ಬಲವಂತು ಇವರನ್ನು ಸಂಚಾರಿ ಉತ್ತರ ಠಾಣೆ, ಉಳ್ಳಾಲದ ಚಿದಾನಂದ ಇವರನ್ನು ಬಜಪೆ ಠಾಣೆ, ಪ್ರವೀಣ್ ಸಲೋಟಗಿ ಇವರನ್ನು ಮಂಗಳೂರು ಸಂಚಾರಿ ಠಾಣೆ ಪೂರ್ವ, ಸುರೇಶ್ ನಗ್ರಾಲ್ ಉಳ್ಳಾಲದಿಂದ ಬಜಪೆಗೆ, ಸಿದ್ದಪ್ಪ ಹಿರೇಕುಂಬಿ ಉಳ್ಳಾಲದಿಂದ ಪಣಂಬೂರು ಠಾಣೆಗೆ, ಸತೀಶ್ ಕುಮಾರ್ ಉಳ್ಳಾಲದಿಂದ ಉತ್ತರ ಠಾಣೆಗೆ, ಹನುಮ ನಾಯ್ಕ್, ಕೆಂಪರಾಜ್ ಇವರನ್ನು ಉಳ್ಳಾಲದಿಂದ ಮಂಗಳೂರು ಉತ್ತರ ಠಾಣೆಗೆ, ಸಾಗರ್ ದೇವರಕಟ್ಟಿ ಉಳ್ಳಾಲದಿಂದ ದಕ್ಷಿಣ ಪೊಲೀಸ್ ಠಾಣೆಗೆ, ದಾಕ್ಷಾಯಿಣಿ ಉಳ್ಳಾಲದಿಂದ ಬಜಪೆ, ರತ್ನವ್ವ ಕೊಣಾಜೆಯಿಂದ ಉಳ್ಳಾಲಕ್ಕೆ, ಪ್ರಿಯಾ ಬಿರಾದಾರ್ ಕೊಣಾಜೆಯಿಂದ ಬಜಪೆಗೆ, ಬರ್ಮ ಬಡಿಗೇರ್ ಕೊಣಾಜೆಯಿಂದ ಬಜಪೆ ಠಾಣೆಗೆ, ಪುರುಷೋತ್ತಮ್ ಕೊಣಾಜೆಯಿಂದ ಸಿಸಿಬಿ ಠಾಣೆಗೆ ವರ್ಗಾಯಿಸಲಾಗಿದೆ.
ಇದನ್ನೂ ಓದಿ: General Transfers: 2023-24ರ ಸಾಲಿನ ಸಾರ್ವತ್ರಿಕ ವರ್ಗಾವಣೆ ಅವಧಿ ಜೂ.30ಕ್ಕೆ ವಿಸ್ತರಣೆ