ಹುಬ್ಬಳ್ಳಿ: ಪೊಲೀಸ್ ಠಾಣೆಯ ಮುಂಭಾಗದಲ್ಲಿಯೇ ನಿಲ್ಲಿಸಿದ್ದ ಪೊಲೀಸ್ ಜೀಪ್ ಅನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಅಣ್ಣಿಗೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅಣ್ಣಿಗೇರಿ ಪಟ್ಟಣದ ನಾಗಪ್ಪ ಹಡಪದ ಬಂಧಿತ ಆರೋಪಿ.
ಪೊಲೀಸ್ ಜೀಪ್ ಮೇಲೆ ಎಲ್ಲಿಲ್ಲದ ಪ್ರೀತಿ: ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಜೀಪ್ ಕ್ಲಿನ್ ಮಾಡುವ ಕೆಲಸ ಮಾಡುತ್ತಿದ್ದ ಈತನಿಗೆ ಪೊಲೀಸ್ ಜೀಪ್ ಮೇಲೆ ಎಲ್ಲಿಲ್ಲದ ಪ್ರೀತಿ. ತಾನು ಪೊಲೀಸ್ ಜೀಪ್ ಓಡಿಸಬೇಕು ಎಂಬ ಆಸೆಯಂತೆ. ಇದಕ್ಕಾಗಿ ನಿನ್ನೆ(ಮಂಗಳವಾರ) ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಪೊಲೀಸ್ ಜೀಪ್ ಕದ್ದು ಪರಾರಿಯಾಗಿದ್ದ. ಕದ್ದು ಪರಾರಿಯಾಗಿದ್ದ ಜೀಪ್ ಬ್ಯಾಡಗಿಯ ಬಳಿ ಪತ್ತೆಯಾಗಿದೆ. ಜೀಪ್ ನಿಲ್ಲಿಸಿದ ಕೂಗಳತೆ ದೂರದಲ್ಲಿಯೇ ಆರೋಪಿ ನಾಗಪ್ಪ ಕೂಡ ಸಿಕ್ಕಿ ಬಿದ್ದಿದ್ದಾನೆ.
ಇದನ್ನೂ ಓದಿ: ಮೃತ ವ್ಯಕ್ತಿ ಹೆಸರಲ್ಲಿ 30 ಸಾಲದ ಖಾತೆ ತೆರೆದು ಕೋಟ್ಯಂತರ ರೂ. ವಂಚನೆ ಆರೋಪ!?
ಕಾರಣ ಕೇಳಿ ಅಚ್ಚರಿಗೊಂಡ ಪೊಲೀಸರು: ವಿಚಾರಣೆ ವೇಳೆ ಕಳ್ಳತನಕ್ಕೆ ಆರೋಪಿ ನೀಡಿದ ಕಾರಣ ಕೇಳಿ ಪೊಲೀಸರು ಅಚ್ಚರಿಗೊಂಡಿದ್ದಾರೆ. ನಾಗಪ್ಪ ಹಡಪದನಿಗೆ ಪೊಲೀಸ್ ವಾಹನವನ್ನ ಚಲಾಯಿಸುವುದು ಅಚ್ಚು ಮೆಚ್ಚಂತೆ. ಅಷ್ಟೇ ಅಲ್ಲ, ಅದನ್ನೇ ಕದ್ದು ಚಲಾಯಿಸಬೇಕೆಂಬ ಕನಸು ಕಂಡಿದ್ದನಂತೆ. ಅದಕ್ಕಾಗಿ, ಹಲವು ತಿಂಗಳುಗಳಿಂದ ಹೊಂಚು ಹಾಕಿ ಆಗಾಗ ಬಂದು ಪೊಲೀಸ್ ಠಾಣೆಯ ಸಿಬ್ಬಂದಿ ವಿಶ್ವಾಸ ಗಳಿಸಿಕೊಂಡಿದ್ದ.
ಪಿಎಸ್ಐ ರಜೆಯಲ್ಲಿರುವುದನ್ನ ಖಾತ್ರಿ ಪಡಿಸಿಕೊಂಡಿದ್ದ ಆತ, ಸಲೀಸಾಗಿ ಬಂದು ತನ್ನ ಆಸೆಯನ್ನ ಪೂರೈಸಿಕೊಂಡನಂತೆ. ಈತನ ವಿಚಿತ್ರ ಆಸೆ ಕೇಳಿ ಪಿಎಸ್ಐ ಎಲ್.ಕೆ.ಜೂಲಕಟ್ಟಿ ದಂಗಾಗಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ