ಹುಬ್ಬಳ್ಳಿ: ಪೊಲೀಸ್ ಕಾನ್ಸಸ್ಟೇಬಲ್ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಡಿಗೇರಿಯ ದೊಡ್ಡಮನಿ ಕಾಲೋನಿಯಲ್ಲಿ ನಡೆದಿದೆ. ಮಲ್ಲಿಕಾರ್ಜುನ ರುದ್ರಾಪೂರ್ (30) ಸಾವಿಗೀಡಾಗಿದ್ದಾರೆ. ಇವರು ಬೆಳಗಾವಿಯ ಸಂಗೊಳ್ಳಿ ಗ್ರಾಮದ ನಿವಾಸಿಯಾಗಿದ್ದು, ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಾಸದ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಅನಾರೋಗ್ಯದಿಂದ ಪಿಎಸ್ಐ ಸಾವು: ಬೆಂಡಿಗೇರಿ ಪೊಲೀಸ್ ಠಾಣೆ ಪಿಎಸ್‌ಐ ಹೆಚ್.ಎಂ.ಕಬಾಡಿ ಅವರು ಅನಾರೋಗ್ಯದಿಂದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಮೂಲತಃ ವಿಜಯಪುರದವರಾದ ಹೆಚ್.ಎಂ.ಕಬಾಡಿ ಅವರು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು.
ಕಬಾಡಿ ಪಿಎಸ್ಐ ಅವರು ಅನಾರೋಗ್ಯದ ಕಾರಣದಿಂದ ಬುಧವಾರ ಎಸ್‌ಡಿಎಂ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೇ ಮರಣ ಹೊಂದಿದ್ದಾರೆ. ಮೃತರ ಆತ್ಮಕ್ಕೆ ಹು-ಧಾ ಪೊಲೀಸ್ ಕಮೀಷನರೇಟ್ ಸಂತಾಪ ಸೂಚಿಸಿದೆ. ಇಂದು ಅವರ ಹುಟ್ಟೂರು ವಿಜಯಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಬೆಂಗಳೂರಿನಲ್ಲಿ ನಡೆದ ಘಟನೆ: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಘಟನೆಯೊಂದರಲ್ಲಿ ಪೊಲೀಸ್ ಹೆಡ್ಕಾನ್ಸ್ಟೇಬಲ್ ತನ್ನಿಂದಾಗಿಯೇ ತನ್ನ ಮಗಳಿಗೂ ಮಾರಕ ಕ್ಯಾನ್ಸರ್ ರೋಗ ತಗುಲಿತೆಂದು ಮನನೊಂದ ಆತ್ಮಹತ್ಯೆಗೆ ಶರಣಾಗಿದ್ದರು. ಅಶೋಕ್ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಮಾರ್ (44) ಆತ್ಮಹತ್ಯೆ ಮಾಡಿಕೊಂಡಿದ್ದರು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಮೂಲದವರಾದ ಕುಮಾರ್, ನಗರದ ಡೈರಿ ಸರ್ಕಲ್ ಬಳಿಯ ಪೊಲೀಸ್ ವಸತಿ ಸಮುಚ್ಚಯದಲ್ಲಿ ವಾಸವಿದ್ದರು. ಕೆಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕುಮಾರ್ ಚಿಕಿತ್ಸೆ ಪಡೆಯುತ್ತಿದ್ದರು. ಮಗಳಿಗೂ ಕ್ಯಾನ್ಸರ್ನ ಕೆಲವು ಲಕ್ಷಣಗಳು ಕಾಣಿಸಿಕೊಂಡಿತ್ತು. ಇದಕ್ಕಾಗಿ ಚಿಕಿತ್ಸೆ ಕೊಡಿಸಿದ್ದರು. ಆದರೆ ತನ್ನಿಂದಲೇ ಮಗಳಿಗೆ ಕ್ಯಾನ್ಸರ್ ಹಬ್ಬಿತು ಎಂದು ನೊಂದು ಮನೆಯಲ್ಲಿ ಸಾವಿಗೆ ಶರಣಾಗಿದ್ದರು. ಅವರ ಇಚ್ಛೆಯಂತೆ ಕಣ್ಣುಗಳನ್ನು ದಾನ ಮಾಡಲಾಗಿತ್ತು.
ಕಲಬುರಗಿ ಆತ್ಮಹತ್ಯೆ ಪ್ರಕರಣ: ಕರ್ತವ್ಯನಿರತ ಪೊಲೀಸ್ ಕಾನ್ಸ್ಟೇಬಲ್ ಗುಂಡು ಹಾರಿಸಿಕೊಂಡು ಆತ್ಮತಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ತಹಶೀಲ್ದಾರ್ ಕಚೇರಿ ಬಳಿ ಕೆಲ ದಿನಗಳ ಹಿಂದೆ ನಡೆದಿತ್ತು. ಮಲ್ಲಿಕಾರ್ಜುನ ಪತ್ತೆಪುರ (34) ಗುಂಡು ಹಾರಿಸಿಕೊಂಡಿದ್ದರು. ನಾಲ್ಕು ವರ್ಷಗಳಿಂದ ಚಿತ್ತಾಪುರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ರೈಫಲ್ನಿಂದ ಗುಂಡು ಹಾರಿಸಿಕೊಂಡು ಅಸುನೀಗಿದ್ದರು.
ಮೈಸೂರಿನ ಘಟನೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ದೇವರಾಜ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಸಪ್ಪ ಕೊನ್ನೂರು (27) ಆತ್ಮಹತ್ಯೆಗೆ ಶರಣಾಗಿದ್ದರು. 2016ನೇ ಬ್ಯಾಚ್ನಲ್ಲಿ ಆಯ್ಕೆಯಾಗಿದ್ದ ಪರಸಪ್ಪ, ಒಂದೂವರೆ ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು. ಪತ್ನಿ ವಾಯುವಿಹಾರಕ್ಕೆ ತೆರಳಿದ್ದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆಗೆ ನಿಖರ ಕಾರಣ ತಿಳಿದುಬಂದಿರಲಿಲ್ಲ. ನಜರ್ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: Cancer disease: ತನ್ನಿಂದ ಮಗಳಿಗೂ ಕ್ಯಾನ್ಸರ್ ತಗುಲಿತೆಂದು ಬೇಸರ.. ಬೆಂಗಳೂರಲ್ಲಿ ಮನನೊಂದು ಕಾನ್ಸ್ಟೇಬಲ್ ಆತ್ಮಹತ್ಯೆ