ಹುಬ್ಬಳ್ಳಿ: ವಚನಶ್ರೀ ಎಂದೇ ಖ್ಯಾತರಾಗಿದ್ದ ಸಾಹಿತಿ ಡಾ.ಸಂಗಮೇಶ ಹಂಡಿಗಿ (84) ಇಂದು ನಿಧನರಾದರು. ಕನ್ನಡ ಸಾಹಿತ್ಯ ಲೋಕಕ್ಕೆ 46 ಗ್ರಂಥಗಳ ಕಾಣಿಕೆ ನೀಡಿರುವ ಡಾ.ಹಂಡಿಗಿಯವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ನವಲಗುಂದದ ಶ್ರೀ ಶಂಕರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗ ಮುಖ್ಯಸ್ಥರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಪಿಎಚ್ಡಿ ಅಧ್ಯಯನ ವಿದ್ಯಾರ್ಥಿಗಳಿಗೆ ಇವರು ಮಾರ್ಗದರ್ಶನ ನೀಡಿದ್ದರು.
ವಿಮರ್ಶಾತ್ಮಕ ಪ್ರಬಂಧಗಳಾದ ಭಕ್ತಿ, ಭಕ್ತಿಮಾರ್ಗ, ಜನಪದ ಸಾಹಿತ್ಯ ಮತ್ತು ದೈವಿ ಶ್ರದ್ಧೆ, ದಶಧರ್ಮ, ಸಂಸ್ಕೃತಿ ಸೌರಭ, ನುಡಿ-ಮಿಡಿ, ಶರಣಾನುಭವ, ವಚನಸ್ತವನ, ವಚನಮಯೂರ, ಕಾವ್ಯಸಂಗಮ, ಕಾವ್ಯಗೌರವ, ನೆನೆದವರ ಮನದಲ್ಲಿ ಸೇರಿದಂತೆ ಜೀವನ ಚರಿತ್ರೆ ಬರೆದಿದ್ದಾರೆ.
ಕನ್ನಡ ನಾಡಿನ ಪ್ರಮುಖ ಪತ್ರಿಕೆಗಳಿಗೆ ವರದಿಗಾರ, ಮಾಮಿಡಿ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿ ಪತ್ರಿಕಾರಂಗದಲ್ಲೂ ಪರಿಣತಿ ಹೊಂದಿರುವ ಇವರು, 2006ರಲ್ಲಿ ಸಕಲೇಶಪುರದಲ್ಲಿ ನಡೆದ ಅಖಿಲ ಕರ್ನಾಟಕ 2ನೇ ವಚನ ಸಾಹಿತ್ಯ ಸಮ್ಮೇಳನದಲ್ಲಿ ವಚನಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
1994ರಲ್ಲಿ ಬಸವನ ಬಾಗೇವಾಡಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1999ರಲ್ಲಿ ವಿಜಯಪುರ ತಾಲೂಕು ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: ವಾರ್ಧಾ ನದಿಯಲ್ಲಿ ಮುಳುಗಿದ ಬೋಟ್: 11 ಮಂದಿ ನೀರುಪಾಲು, 3 ಮೃತದೇಹ ಹೊರಕ್ಕೆ