ಹುಬ್ಬಳ್ಳಿ: ರಾಜ್ಯದಲ್ಲಿ ಮತ್ತೆ ಪರ್ಸಂಟೇಜ್ ಸದ್ದು ಕೇಳಿ ಬರಲಾರಂಭಿಸಿದೆ. ಪರ್ಸಂಟೇಜ್ ಕಾರಣಕ್ಕೆ ಈ ಹಿಂದೆ ಹೊರಗುತ್ತಿಗೆದಾರ ಸಂತೋಷ್ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಮತ್ತೋರ್ವ ಗುತ್ತಿಗೆದಾರ ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಿದ್ದು, ರಾಜ್ಯ ಸರ್ಕಾರದ ಕಾರ್ಯವೈಖರಿ ತೀವ್ರ ಚರ್ಚೆಗೆ ಗ್ರಾಸ ಒದಗಿಸಿದೆ.
ರಾಜ್ಯ ಸರ್ಕಾರಕ್ಕೆ ಒಂದು ಮುಗಿಯುತ್ತಿದ್ದಂತೆಯೇ ಮತ್ತೊಂದು ಕಂಟಕ ಎದುರಾಗಲಾರಂಭಿಸಿದೆ. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಕೆ ಎಸ್ ಈಶ್ವರಪ್ಪ ಅವರು ಸಚಿವ ಸ್ಥಾನ ಬಲಿ ಪಡೆಯುವಂತೆ ಮಾಡಿತ್ತು. ಇದೀಗ ಮತ್ತೋರ್ವ ಗುತ್ತಿಗೆದಾರ ಅಧಿಕಾರಿಗಳ ಪರ್ಸಂಟೇಜ್ ಡಿಮ್ಯಾಂಡ್ನಿಂದ ಬೇಸತ್ತು ದಯಾ ಮರಣಕ್ಕಾಗಿ ಮನವಿ ಮಾಡಿದ್ದಾನೆ. ಹುಬ್ಬಳ್ಳಿ ಮೂಲದ ಬಸವರಾಜ್ ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಿದ ಗುತ್ತಿಗೆದಾರನಾಗಿದ್ದಾನೆ.
ಹಾಗೆ ನೋಡಿದರೆ ಈತ ಯಾವುದೇ ಗುತ್ತಿಗೆ ಕೆಲಸ ಮಾಡಿಲ್ಲ. ಬದಲಿಗೆ ಕೋವಿಡ್ನಂತಹ ತುರ್ತು ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಕೋವಿಡ್ ಪರಿಕರಗಳನ್ನು ಪೂರೈಸುವ ಕೆಲಸ ಮಾಡಿದ್ದ. ಕಾನೂನು ಪ್ರಕಾರವೇ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿ ಆತ ಪರಿಕರಗಳನ್ನು ಸಪ್ಲೈ ಮಾಡಿದ್ದ. ಸಾಮಗ್ರಿಗಳನ್ನು ಪೂರೈಸಿ ಎರಡು ವರ್ಷ ಗತಿಸಿದರೂ ಇದುವರೆಗೂ ಬಿಲ್ ಮಾತ್ರ ಪಾವತಿಯಾಗಿಲ್ಲ.
ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಬಸವರಾಜ್, ಚಿಕ್ಕಮಗಳೂರು ಜಿಲ್ಲೆಯ ಕಡೂರು ಮತ್ತು ಮೂಡಗೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಕೋವಿಡ್ ಪರಿಕರ ಸರಬರಾಜು ಮಾಡಿದ್ದ ಎನ್ನಲಾಗಿದೆ. ಒಟ್ಟು 69 ಪಂಚಾಯಿತಿಗೆ ಪರಿಕರಗಳ ಸರಬರಾಜು ಮಾಡಿದ್ದರಂತೆ. 2020 - 21ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶ ಪತ್ರದ ಅನುಸಾರ ಮೂಡಿಗೆರೆ ತಾಲೂಕಿಗೆ 27 ಲಕ್ಷ ಕಡೂರು ತಾಲೂಕಿಗೆ 85 ಲಕ್ಷ ರೂಪಾಯಿಯ ಪರಿಕರ ಪೂರೈಕೆ ಮಾಡಿದ್ದನು. ಸರಬರಾಜು ಮಾಡಿ 2 ವರ್ಷ ಗತಿಸಿದರೂ ಬಿಲ್ ಪಾವತಿಯಾಗಿಲ್ಲ.

ಇದನ್ನೂ ಓದಿ: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ : ಹಾಲಿ ಹಾಗೂ ಮಾಜಿ ಪಿಡಿಒಗಳ ಸಹಿತ ಹಲವರ ವಿಚಾರಣೆ
ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಬಿಲ್ ಪಾವತಿ ಮಾಡ್ತಿಲ್ಲ. ಕಡೂರು ಇಒ ದೇವರಾಜ್ ನಾಯಕ್ ಅವರಿಂದ ಕಮಿಷನ್ ಹಣಕ್ಕೆ ಬೇಡಿಕೆ ಆರೋಪ ಕೇಳಿಬಂದಿದೆ. ಬೇರೆ ಬೇರೆಯವರ ಹೆಸರಲ್ಲಿ ಬಿಲ್ನ ಒಟ್ಟು 40 ಪರ್ಸಂಟೇಜ್ಗಿಂತ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಾಲ ಸೋಲ ಮಾಡಿ ಸಾಮಗ್ರಿ ಪೂರೈಸಿದ್ದೇನೆ. ನಾನೆಲ್ಲಿಂದ ಹಣ ಕೊಡಲಿ ಎಂದು ಬಸವರಾಜ್ ಪ್ರಶ್ನಿಸುತ್ತಿದ್ದಾರೆ.
ಶಾಸಕರ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್ ಆರೋಪ: ವಿಚಿತ್ರ ಎಂದರೆ ಶಾಸಕರ ಹೆಸರಲ್ಲಿಯೂ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರಂತೆ. ಪರ್ಸಂಟೇಜ್ ಪಾವತಿ ಮಾಡದ ಹಿನ್ನೆಲೆ ಬಿಲ್ ಬಾಕಿ ಉಳಿಸಿಕೊಂಡಿದ್ದಾನಂತೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗುತ್ತಿಗೆದಾರ ಬಸವರಾಜ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರ ಕಾರ್ಯಾಲಯದಿಂದ ಆದೇಶ ಬಂದರೂ ಡೋಂಟ್ ಕೇರ್ ಅಂತಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ನಿರ್ದೇಶನ ನೀಡಿದರೂ ಬಿಲ್ ಬಿಡುಗಡೆಯಾಗಿಲ್ಲ.
ಇದರ ನಡುವೆ ಸಾಲಗಾರರ ಕಾಟ ಹೆಚ್ಚಾಗಿದೆ. ಕೊನೆಗೆ ದಯಾಮರಣದ ಮೊರೆ ಹೋಗುತ್ತಿರುವುದಾಗಿಯೂ ದೂರುದಾರರು ತಿಳಿಸಿದ್ದಾರೆ. ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳಿಗೆ ದಯಾಮರಣಕ್ಕಾಗಿ ಎ.ಬಸವರಾಜ್ ಮನವಿ ಮಾಡಿದ್ದಾರೆ. ಒಟ್ಟಾರೆ ರಾಜ್ಯ ಸರ್ಕಾರದ ಪರ್ಸಂಟೇಜ್ ಜೋರಾಗಿ ಸದ್ದು ಮಾಡಲಾರಂಭಿಸಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಪರ್ಸಂಟೇಜ್ ಕಿಂಗ್.. ಸಚಿವ ಕೆ ಎಸ್ ಈಶ್ವರಪ್ಪ