ಧಾರವಾಡ : ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಗಳಿಗೆ ಸಂಕಷ್ಟ ಎದುರಾಗಿದೆ. ಅಕ್ರಮವಾಗಿ ಮನೆ ಮಾಡಿಕೊಂಡಿದ್ದಾರೆ ಎಂದು ತಹಶೀಲ್ದಾರ್ ಸೂಚನೆಯ ಮೇರೆಗೆ ನೋಟಿಸ್ ನೀಡಿದ್ದರಿಂದ ಜನರಲ್ಲಿ ಆತಂಕ ಮನೆಮಾಡಿದೆ.
ಸುದ್ದಿಯ ಸಂಪೂರ್ಣ ವಿವರ: ಧಾರವಾಡ ನಗರ ಹೊರವಲಯದ ಹಳಿಯಾಳ ರಸ್ತೆಯಲ್ಲಿರುವ ಡೋರ್‌ವೆಲ್ ಫ್ಯಾಕ್ಟರಿ ಪ್ರದೇಶದ ಜನರು ಮೂಲತಃ ಧಾರವಾಡ ತಾಲೂಕಿನ ನಿವಾಸಿಗಳು. ಅಲ್ಲಿನ ಸರ್ಕಾರಿ ಖುಲ್ಲಾ ಜಾಗದಲ್ಲಿ ಮನೆ ಹಾಕಿಕೊಂಡಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಇವರು 20-30 ವರ್ಷಗಳಿಂದಲೂ ಅಲ್ಲಿಯೇ ನೆಲೆಯೂರಿದ್ದಾರೆ.
ಸಲಕಿನಕೊಪ್ಪ ಗ್ರಾಮ ವ್ಯಾಪ್ತಿಯ ಸರ್ವೆ ನಂ. 144 ಮತ್ತು 145 ರಲ್ಲಿ ಗುಡಿಸಲು ಹಾಕಿಕೊಂಡಿದ್ದರು. ಒಬ್ಬರಾದ ನಂತರ ಒಬ್ಬರಂತೆ 40ಕ್ಕೂ ಹೆಚ್ಚು ಜನ ಗುಡಿಸಲು ಹಾಕಿಕೊಂಡಿದ್ದರು. ಬಳಿಕ ಅಲ್ಲಿನ ಜನರು ಮನೆ ಮಾಡಿಕೊಂಡಿದ್ದಾರೆ. ತದನಂತರದ ವಿವಿಧ ಚುನಾವಣೆಗಳಲ್ಲಿ ಇವರ ಬಳಿ ಮತ ಕೇಳೋಕೆ ಬಂದ ರಾಜಕಾರಣಿಗಳು, ಚುನಾವಣೆ ಗೆದ್ದ ಜನಪ್ರತಿನಿಧಿಗಳು ಹಕ್ಕುಪತ್ರ ಕೊಡುತ್ತೇವೆ ಎಂಬ ಆಶ್ವಾಸನೆ ನೀಡಿದ್ದಾರೆ. ಆದರೀಗ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಸಿಕೊಂಡು ಬದುಕು ಸಾಗಿಸುತ್ತಿದ್ದ ಜನರಿಗೆ ಗುಡಿಸಲು ತೆರವುಗೊಳಿಸಿ ಎಂದು ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಸುಮಾರು 20-30 ವರ್ಷಗಳಿಂದ ಇವರು ಜೀವನ ನಡೆಸುತ್ತಿದ್ದಾರೆ. ಡೋರ್‌ವೆಲ್ ಫ್ಯಾಕ್ಟರಿ ಅನ್ನೋದು ಇವರ ವಸತಿ ವಿಳಾಸ. ವೋಟಿಂಗ್ ಕಾರ್ಡ್, ರೇಷನ್ ಕಾರ್ಡ್ ಎಲ್ಲವೂ ಇದೇ ಸ್ಥಳದ ಹೆಸರಿನಲ್ಲಿ ಆಗಿದೆ. ಆಧಾರ್ ಕಾರ್ಡ್‌ನಲ್ಲಿಯೂ ಡೋರ್ ವೆಲ್ ಫ್ಯಾಕ್ಟರಿ ಅಂತಾನೇ ಇದೆ. ಇದೆಲ್ಲವೂ ಆದ ಬಳಿಕ ಒಮ್ಮೆ ಹಕ್ಕುಪತ್ರಗಳಿಗಾಗಿ ಅರ್ಜಿ ಸಹಾ ಕರೆದು, ಸೂಕ್ತ ದಾಖಲೆಗಳನ್ನು ಕೊಡುವಂತೆ ಅಧಿಕಾರಿಗಳು ತಿಳಿಸಿದ್ದರಂತೆ. ಆಗ ಜನರು ಸೂಕ್ತ ದಾಖಲೆಗಳನ್ನು ಸಲ್ಲಿಸಿದ್ದರಂತೆ. ಆದರೂ ಹಕ್ಕುಪತ್ರಗಳು ಬಂದಿರಲಿಲ್ಲ. ಹೋರಾಟಗಳು ನಡೆದಿವೆ. ಹೀಗಾಗಿ ಇದರ ಪ್ರತಿಫಲವಾಗಿ ಹಕ್ಕು ಪತ್ರ ಬರಲಿವೆ ಅಂದುಕೊಂಡಿದ್ದರು. ಆದರೆ ಈಗ ನೋಟಿಸ್ ಬಂದಿದೆ.
'ನಮಗೆ ಇಲ್ಲೇ ವಾಸಿಸಲು ಅನುವು ಮಾಡಿಕೊಡಬೇಕು': "ನಾವು ಸಲಕಿನಕೊಪ್ಪ ಗ್ರಾಮದವರು. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದೇವೆ. ನಮಗೆ ಅಲ್ಲಿ ಯಾವ ಸೌಲಭ್ಯವೂ ಇಲ್ಲ. ತುಂಬಾ ಸಲ ಡಿಸಿ ಆಫೀಸ್ಗೆ, ರಾಜಕಾರಣಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆಶ್ವಾಸನೆ ಕೊಡುತ್ತಾರೆ. ಓಟ್ಗಿಂತ ಮುಂಚಿತವಾಗಿ ಬರುತ್ತಾರೆ. ನಾವು ಮಾಡಿಕೊಡುತ್ತೇವೆ ಅನ್ನುತ್ತಾರೆ. ಆದರೆ ಯಾರೂ ಮುಂದೆ ಬರಲ್ಲ. ನಾವಿಲ್ಲಿ ಸುಮಾರು 50 ಕುಟುಂಬಗಳು 30 ವರ್ಷಗಲಿಂದ ವಾಸಮಾಡುತ್ತಿದ್ದೇವೆ. ಆದರೆ ಈಗ ನಮಗೆ ತಹಶೀಲ್ದಾರ್ ನೋಟಿಸ್ ಕಳುಹಿಸಿದ್ದಾರೆ. ಇಲ್ಲಿಯೇ ವಾಸಿಸಲು ಅನುವು ಮಾಡಿಕೊಡಬೇಕು. ಸಚಿವ ಸಂತೋಷ್ ಲಾಡ್ ಅವರಿಗೂ ಮನವಿ ಸಲ್ಲಿಸಿದ್ದೇವೆ. ಅವರೂ ಆಶ್ವಾಸನೆ ನೀಡಿದ್ದಾರೆ" ಎಂದು ನಿವಾಸಿ ಅನ್ನಪೂರ್ಣ ಡಾಂಗೆ ಹೇಳಿದರು.
ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, "ಈ ಜಾಗದಲ್ಲಿ ಸುಮಾರು 15-20 ವರ್ಷಕ್ಕೂ ಅಧಿಕ ಸಮಯ ಯಾರು ವಾಸ ಮಾಡುತ್ತಾರೋ ಅವರ ಡಿಟೇಲ್ಸ್ ಕೊಡುವಂತೆ ಹೇಳಿದ್ದೇನೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿ ಅವರಿಗೆ ಪಟ್ಟ ಕೊಡಿಸಲು ಪ್ರಯತ್ನ ಮಾಡುತ್ತೇನೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೆ.ಆರ್.ಆಸ್ಪತ್ರೆ, ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತರಿಂದ ಸ್ವಯಂಪ್ರೇರಿತ ದೂರು ದಾಖಲು