ಹುಬ್ಬಳ್ಳಿ: ನಗರದಲ್ಲಿ ದಿನದಿಂದ ದಿನಕ್ಕೆ ಜನದಟ್ಟಣೆ ಹೆಚ್ಚುತ್ತಿದ್ದು, ಅದರ ಜೊತೆಗೆ ವಾಹನಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಕೊರೊನಾ ಭಯಕ್ಕೆ ಸಾರ್ವಜನಿಕರು ಸಾರ್ವಜನಿಕ ವಾಹನ ಬಳಸದೇ, ತಮ್ಮ ಸ್ವಂತ ವಾಹನ ಬಳಸಿಕೊಂಡು ಮಾರುಕಟ್ಟೆಗೆ ಬರುತ್ತಾರೆ. ಆದ್ರೆ ಬಂದ ಮೇಲೆ ಬೈಕ್ ಹಾಗೂ ಕಾರ್ಗಳನ್ನು ಪಾರ್ಕ್ ಮಾಡುವುದೇ ದೊಡ್ಡ ತಲೆನೋವಾಗಿದೆ.
ವಾಹನಗಳನ್ನು ಪಾರ್ಕ್ ಮಾಡಬೇಕು ಎಂದುಕೊಂಡರೆ ಎಲ್ಲಿ ನೋಡಿದರೂ ತಗ್ಗು ಗುಂಡಿಗಳ ದುರಸ್ತಿ ಕಾಮಗಾರಿಗಳು ನಡೆಯುತ್ತಿವೆ. ಆದ್ದರಿಂದ ಅಲ್ಲೇ ಪಾರ್ಕ್ ಮಾಡಿ ಹೋಗಿ ಬರುವುದರೊಳಗೆ, ಟ್ರಾಫಿಕ್ ಪೊಲೀಸರು ಬೈಕ್ ಎತ್ತಿಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ. ಇದರಿಂದಾಗಿ ಬೈಕ್ ಸವಾರರಿಗೆ ಬೈಕ್ ಪಾರ್ಕ್ ಮಾಡುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ನಗರದಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿರುವ ವಾಹನಗಳನ್ನು ಪೊಲೀಸರು ಎತ್ತಿಕೊಂಡು ಹೋಗುವ ಮೊದಲು ಆ ಗಾಡಿಯ ನಂಬರ್ನನ್ನು ಮೈಕಿನಲ್ಲಿ ಹೇಳಿ ಜಾಗದಲ್ಲಿ 5 ನಿಮಿಷ ಕಾಯಬೇಕು ಎಂಬ ರೂಲ್ಸ್ ಇದೆ. ಆದ್ರೆ ಇದೆಲ್ಲವನ್ನು ಗಾಳಿಗೆ ತೂರಿದ ಪೊಲೀಸ್ ಸಿಬ್ಬಂದಿ ಹೇಳದೇ ಕೇಳದೆ ವಾಹನ ಎತ್ತಿಕೊಂಡು ಹೋಗುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಚರಂಡಿ ವ್ಯವಸ್ಥೆಯ ಕಾಮಗಾರಿಯು ರಸ್ತೆಯ ಎರಡು ಬದಿಯಲ್ಲಿ ಮಾಡುತ್ತಿರುವ ಹಿನ್ನೆಲೆ ಪಾರ್ಕಿಂಗ್ಗೆ ಯಾವುದೇ ಪರ್ಯಾಯ ವ್ಯವಸ್ಥೆಯನ್ನೂ ಸಹ ಮಾಡಿಲ್ಲ. ಪಾರ್ಕಿಂಗ್ ಮಾಡಿದ ಬೈಕ್ಗಳನ್ನು ಯಾವುದೇ ಕರೆಯನ್ನು ನೀಡಿದೆ, ಪೊಲೀಸರು ಟೊಯಿಂಗ್ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಜೊತೆಗೆ 1,000ರೂ.ನಿಂದ 1600 ರೂ.ವರೆಗೆ ಹಣ ಕೇಳುತ್ತಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.