ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಆಯೋಜನೆ ಮಾಡಲಾಗಿರುವ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬೆಳಗಾವಿಯಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ವಿರೋಧದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೆ. 14ರಂದು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿರುವ ಇನ್ವೆಸ್ಟ್ ಕರ್ನಾಟಕ ಸಮಾವೇಶವನ್ನು ಉತ್ತರ ಕರ್ನಾಟಕವೇ ಪ್ರತಿನಿಧಿಸುವ ಸಮಾವೇಶ ಎಂದು ಹೇಳಲಾಗುತ್ತಿದೆ. ಆದರೂ ವಿರೋಧ ವ್ಯಕ್ತವಾಗುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಂದಾಯ ವಿಭಾಗದ ಕೇಂದ್ರ ಸ್ಥಾನಕ್ಕೆ ಮಲತಾಯಿ ಧೋರಣೆ ತೋರಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬೃಹತ್ ಮತ್ತು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇಂತಹ ಮಹತ್ವದ ಸಮಾವೇಶವನ್ನು ಕಂದಾಯ ವಿಭಾಗದ ಕೇಂದ್ರ ಸ್ಥಾನವಾದ ಬೆಳಗಾವಿಯಲ್ಲಿ ಆಯೋಜಿಸಬೇಕಿತ್ತು. ಸುವರ್ಣ ವಿಧಾನಸೌಧದಲ್ಲಿ ನಡೆಸಿದ್ದರೆ, ಅದನ್ನು ಬಳಸಿಕೊಂಡಂತೆಯೂ ಆಗುತ್ತಿತ್ತು. ಆದರೆ, ಹುಬ್ಬಳ್ಳಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಬೆಳಗಾವಿಯನ್ನು ಕಡೆಗಣಿಸಲಾಗುತ್ತಿದೆ ಎನ್ನಲಾಗುತ್ತಿದೆ.
ಶೆಟ್ಟರ್ ಅವರು ‘ತವರಿನ ಮೇಲೆ ಹೆಚ್ಚಿನ ಪ್ರೀತಿ’ ತೋರಿಸುತ್ತಿದ್ದಾರೆ. ಹೀಗಾಗಿ, ಸಮಾವೇಶವನ್ನು ಬೆಳಗಾವಿಯ ಉದ್ದಿಮೆದಾರರು ಬಹಿಷ್ಕರಿಸಬೇಕು ಎನ್ನುವ ಕರೆಯನ್ನೂ ಸಾಮಾಜಿಕ ಜಾಲತಾಣದಲ್ಲಿ ಕೆಲವರು ನೀಡಿದ್ದಾರೆ. ಅದು ಫೇಸ್‌ಬುಕ್, ಟ್ವಿಟರ್ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ.