ಹುಬ್ಬಳ್ಳಿ: ಅವಳಿ ನಗರಕ್ಕೆ 12 ಇಂದಿರಾ ಕ್ಯಾಂಟೀನ್‌ಗಳು ಮಂಜೂರಾಗಿದ್ದವು. ಆದರೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ 12ರಲ್ಲಿ 9 ಮಾತ್ರ ಕಾರ್ಯನಿರ್ವಹಣೆ ಮಾಡುತ್ತಿವೆ. ಇನ್ನೂ ಮೂರು ಕ್ಯಾಂಟೀನ್‌ಗಳು ಪ್ರಾರಂಭವಾಗದೆ ಕೋಟ್ಯಂತರ ರೂಪಾಯಿ ಹಳ್ಳ ಹಿಡಿದಿದೆ.
ಜನಸಾಮಾನ್ಯರಿಗೆ ಮೂರು ಹೊತ್ತು ಕಡಿಮೆ ದರದಲ್ಲಿ ಊಟ ಮತ್ತು ಉಪಾಹಾರ ನೀಡುವ 12 ಇಂದಿರಾ ಕ್ಯಾಂಟೀನ್‌ಗಳು ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಮಂಜೂರಾಗಿದ್ದವು. ಆದರೆ, ಸೇವೆ ಒದಗಿಸುತ್ತಿರುವುದು ಮಾತ್ರ ಒಂಭತ್ತು ಕ್ಯಾಂಟೀನ್‌ಗಳು. ಉಳಿದ ಮೂರು ಕ್ಯಾಂಟೀನ್‌ಗಳನ್ನು ಮೂರು ವರ್ಷಗಳಾದರೂ ಆರಂಭಿಸಿಲ್ಲ.
ಧಾರವಾಡದಲ್ಲಿ ಹೊಸ ಬಸ್ ನಿಲ್ದಾಣ ಹಾಗೂ ಮಿನಿ ವಿಧಾನಸೌಧ, ಹುಬ್ಬಳ್ಳಿಯಲ್ಲಿ ಕಿಮ್ಸ್ ಆಸ್ಪತ್ರೆ ಆವರಣ, ಗೋಕುಲ ರಸ್ತೆಯಲ್ಲಿರುವ ಹಳೇ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲ್, ಬೆಂಗೇರಿ, ಸೋನಿಯಾ ಗಾಂಧಿ ನಗರ ಹಾಗೂ ಎಸ್.ಎಂ.ಕೃಷ್ಣಾ ನಗರದಲ್ಲಿ ಸದ್ಯ ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಆದ್ರೆ ನವನಗರ, ಕಲಾಭವನ ಹಾಗೂ ಕೇಶ್ವಾಪುರದಲ್ಲಿ ಕ್ಯಾಂಟೀನ್‌ಗಾಗಿ ಪಾಲಿಕೆ ಗುರುತಿಸಿದ್ದ ಜಾಗದ ಬಗ್ಗೆ ವಿವಾದ ಎದ್ದಿತ್ತು. ಬೇರೆ ಉದ್ದೇಶಕ್ಕೆ ಮೀಸಲಿರಿಸಿದ್ದ ಸ್ಥಳವನ್ನು ಕ್ಯಾಂಟೀನ್ ನಿರ್ಮಾಣಕ್ಕೆ ಬಳಸಲಾಗುತ್ತಿದೆ ಎಂದು ಕೆಲವೆಡೆ ಸ್ಥಳೀಯರು ಪ್ರತಿಭಟನೆ ಕೂಡ ಮಾಡಿದ್ದರು. ಬೇರೆ ಕಡೆ ಜಾಗ ಹುಡುಕಲು ಪಾಲಿಕೆ ಮುಂದಾಗಿತ್ತು. ಆದರೆ, ಮೂರು ವರ್ಷಗಳಾದರೂ ಸ್ಥಳ ಗುರುತಿಸಿ ಅಂತಿಮಗೊಳಿಸಿಲ್ಲ. ಇದರಿಂದ ಇಂದಿರಾ ಕ್ಯಾಂಟೀನ್ ನಂಬಿಕೊಂಡಿದ್ದ ಜನರಿಗೆ ಊಟ-ಉಪಹಾರ ಸಿಗದಂತಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಸಾರಿಗೆ ಬಸ್ ಸೇವೆ ಪುನರಾರಂಭ
ಧಾರವಾಡ ಜಿಲ್ಲೆಯಿಂದ ಮಾತ್ರವಲ್ಲದೇ ಬೇರೆ ಊರುಗಳಿಂದ ಬರುವ ಕೂಲಿ ಕಾರ್ಮಿಕರು ಇಂದಿರಾ ಕ್ಯಾಂಟೀನ್ನಲ್ಲಿ ಕಡಿಮೆ ದರದಲ್ಲಿ ಊಟ ಮಾಡಿ ಕೆಲಸ ಕಾರ್ಯದಲ್ಲಿ ತೊಡಗುತ್ತಿದ್ದರು. ಆದರೆ ಪಾಲಿಕೆ ಸ್ಥಳ ಗುರುತಿಸದೇ ಬೇಜವಾಬ್ದಾರಿ ತೋರಿರುವುದರಿಂದ ಮೂರು ವರ್ಷಗಳಾದರೂ ಮೂರು ಇಂದಿರಾ ಕ್ಯಾಂಟೀನ್ ಆರಂಭಗೊಂಡಿಲ್ಲವೆಂದು ಹಲವರು ಅಸಮಾಧಾನ ಹೊರಹಾಕಿದ್ದಾರೆ. ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ವಹಣೆ ಮಾಡುತ್ತಿರುವ ಮಯೂರ ಆದಿತ್ಯ ರೆಸಾರ್ಟ್ ಸಂಸ್ಥೆಯ ಬಾಕಿ ಹಣದ ಪೈಕಿ, ಪಾಲಿಕೆ ಪಾಲಿನ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡದೆ ಇರುವುದರಿಂದ ಕ್ಯಾಂಟೀನ್ ಆರಂಭಕ್ಕೆ ಹಿನ್ನಡೆಯಾಗಿದೆ ಎನ್ನಲಾಗಿದೆ.
ಕೂಡಲೇ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸೂಕ್ತ ಕ್ರಮ ಜರುಗಿಸಿ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಬೇಕಿದೆ.