ಹುಬ್ಬಳ್ಳಿ : ನಗರದ ಹಳೆ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಇಬ್ಬರಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ. ಇರ್ಪಾನ ನಾಲತವಾಡ ಹಾಗೂ ಸಿಕಂದರ ಎಂಬವರಿಗೆ ಜಾಮೀನು ಸಿಕ್ಕಿದೆ.
2022ರ ಏಪ್ರಿಲ್ 17ರಂದು ಒಂದು ಸಮುದಾಯವನ್ನು ಕೆರಳಿಸುವ ರೀತಿಯಲ್ಲಿ ಪೋಸ್ಟ್ ವೈರಲ್ ಮಾಡಲಾಗಿತ್ತು. ಇದನ್ನು ಖಂಡಿಸಿ ಮತ್ತೊಂದು ಕೋಮಿನವರು ಆರೋಪಿಯನ್ನು ತಮ್ಮ ಕೈಗೆ ಒಪ್ಪಿಸುವಂತೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯೆದುರು ಪ್ರತಿಭಟನೆ ನಡೆಸಿದ್ದರು. ಆಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಗಲಭೆಯಾಗಿತ್ತು.
ಪೊಲೀಸ್ ವಾಹನಗಳು ಜಖಂಗೊಂಡ ಹಿನ್ನೆಲೆಯಲ್ಲಿ ಒಟ್ಟು 156 ಜನರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಅಲ್ಲದೇ ಆರೋಪಿಗಳ ವಿರುದ್ಧ ದೇಶದ್ರೋಹದ ಕೇಸ್ ಹಾಕಲಾಗಿತ್ತು. ಈ ಹಿಂದೆ ಎಂಐಎಂನ ಪಾಲಿಕೆ ಸದಸ್ಯ ನಜೀರ್ ಹೊನ್ಯಾಳ ಸಹಿತ 7 ಮಂದಿಗೆ ಜಾಮೀನು ಮಂಜೂರಾಗಿತ್ತು. ಈಗ ಸುಪ್ರೀಂ ಕೋರ್ಟ್ ಇಬ್ಬರಿಗೆ ಜಾಮೀನು ನೀಡಿದೆ.
ಅಲ್ಲದೇ ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅಮಾಯಕರು ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಪರಿಶೀಲಿಸಿ ಎಂದು ಬರೆದ ಪತ್ರ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರು ಆಕ್ಷೇಪವೆತ್ತಿದ್ದರು. ಬೆಂಗಳೂರಿನ ಕೊತ್ವಾಲ ಎಂಬ ನ್ಯಾಯವಾದಿಗಳು ತಮ್ಮ ಹಿರಿಯ ವಕೀಲರ ಮುಖಾಂತರ ಈ ಇಬ್ಬರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಶಾಸಕ ಎಸ್ ಆರ್ ವಿಶ್ವನಾಥ್ ವಿರುದ್ಧದ ಜಾಮೀನು ರಹಿತ ಬಂಧನ ವಾರಂಟ್ ರದ್ದು ಕೋರಿ ಅರ್ಜಿ: ಆದೇಶ ಕಾಯ್ದಿರಿಸಿದ ನ್ಯಾಯಾಲಯ