ಹುಬ್ಬಳ್ಳಿ: ಗಣೇಶ ನಿಮಜ್ಜನ ವೇಳೆ ನರ್ಸಿಂಗ್ ವಿದ್ಯಾರ್ಥಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಹುಬ್ಬಳ್ಳಿಯ ಉಪ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ರವಿ ಕಾಟಿಗಾರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ನಿನ್ನೆ ರಾತ್ರಿ ಗಣೇಶ ಮೆರವಣಿಗೆ ವೇಳೆ ಹರ್ಷಾ ಕಾಂಪ್ಲೆಕ್ಸ್ ಬಳಿ ಚಾಕುವಿನಿಂದ ಐವರ ಮೇಲೆ ದಾಳಿಯಾಗಿತ್ತು. ಅದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನರ್ಸಿಂಗ್ ವಿದ್ಯಾರ್ಥಿ ಬಸವರಾಜ್ ವುರೇಶ್ ಶಿವುರ ಮೃತ ಪಟ್ಟಿದ್ದ. ಪ್ರಕರಣ ನಡೆದು ಒಂದು ದಿನ ಕಳೆಯುವಷ್ಟರಲ್ಲಿ ಆರೋಪಿಗಳನ್ನ ಬಂಧಿಸುವಲ್ಲಿ ಅವಳಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿದ್ಯಾರ್ಥಿ ಕೊಲೆ ಪ್ರಕರಣ ಅವಳಿ ನಗರದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದು ಪೊಲೀಸ್ ಭದ್ರತೆಯ ಮೇಲೆ ಅನುಮಾನ ಹುಟ್ಟುವಂತೆ ಮಾಡಿತ್ತು. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡು ಆರೋಪಿಗಳನ್ನು ಬಂಧಿಸಲಾಗಿದ್ದು, ಡಿಸಿಪಿ ಡಿ.ಎಲ್.ನಾಗೇಶ್,ಎಸಿಪಿ ಹೆಚ್.ಕೆ.ಪಠಾಣ್ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ.