ಹುಬ್ಬಳ್ಳಿ: ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಸಿಗುತ್ತದೆ ಎಂಬ ಖಾತ್ರಿಯಿಂದ ಸಾಕಷ್ಟು ಕೆಲಸ ಮಾಡಿದ್ದೇನೆ. ಆದ್ರೆ ಕೊನೆ ಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ನನಗೆ ನೂರಕ್ಕೆ ನೂರಷ್ಟು ನೋವಾಗಿದೆ ಎಂದು ಕಲಘಟಗಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಗರಾಜ್ ಛಬ್ಬಿ ಅಸಮಾಧಾನ ಹೊರಹಾಕಿದ್ದಾರೆ.
ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಪ್ರಾಮಾಣಿಕ ನಿಷ್ಠೆಯನ್ನು ಪಕ್ಷದ ಹಿರಿಯ ಮುಖಂಡರು ಗುರುತಿಸಿಲಿಲ್ಲ. ನನಗೆ ಮನ್ನಣೆ ನೀಡಲಿಲ್ಲ. ಕಾಂಗ್ರೆಸ್ ಪಕ್ಷವನ್ನೂ ನನ್ನ ಉಸಿರಾಗಿಸಿಕೊಂಡು ಪಕ್ಷದ ಸಂಘಟನೆಗೆ ಹಗಲಿರುಳು ಶ್ರಮಿಸಿದ್ದೇನೆ. ಅದನ್ನೂ ಮುಖಂಡರು ಗುರುತಿಸದೇ ಕೊನೆಗೂ ನನ್ನನ್ನು ಕೈಬಿಟ್ಟರು. ನಾಳೆ ಬೆಳಗ್ಗೆ ಪಕ್ಷಕ್ಕೆ ರಾಜೀನಾಮೆ ಪತ್ರ ರವಾನಿಸಲಿದ್ದೇನೆ ಎಂದು ಹೇಳಿದರು.
ಬಿಜೆಪಿ ಸೇರ್ಪಡೆ ಕುರಿತಾಗಿ ಇನ್ನೂ ಎರಡು ದಿನಗಳಲ್ಲಿ ನನ್ನ ಅಭಿಪ್ರಾಯ ತಿಳಿಸಲಿದ್ದೇನೆ. ಸದ್ಯ ಯಾವುದೇ ಅಂತಹ ವಿಚಾರವಿಲ್ಲ. ನನ್ನ ಎಲ್ಲ ಕಾರ್ಯಕರ್ತರ ಜತೆಗೆ ಚರ್ಚಿಸಿ, ಅವರ ನಿರ್ಣಯದಂತೆ ಮುಂದಿನ ನಿರ್ಧಾರದ ಬಗ್ಗೆ ವಿಚಾರ ಮಾಡುವೆ ಎಂದ ಅವರು, ಟಿಕೆಟ್ ಕೊಡುವವರು ನನಗೆ ಬಹಳಷ್ಟು ಭರವಸೆ ನೀಡಿದ್ದರು. ಹೀಗಾಗಿ ಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದೆ. ಆದರೆ ಅವರು ಏನು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡ್ರೋ ಗೊತ್ತಿಲ್ಲ. ಅನಿವಾರ್ಯವಾಗಿ ಪಾರ್ಟಿ ಬಿಡಬೇಕಾಗಿದೆ ಎಂದರು.
ಡಿಕೆಶಿ ಬಣದಲ್ಲಿ ಗುರುತಿಸಿಕೊಂಡಿದ್ದ ಛಬ್ಬಿ: ಕಲಘಟಗಿ ಕ್ಷೇತ್ರ ಟಿಕೆಟ್ಗಾಗಿ ಲಾಡ್ ಹಾಗೂ ಛಬ್ಬಿ ನಡುವೆ ಬಾರಿ ಪೈಪೋಟಿ ಏರ್ಪಟ್ಟಿತು. ಮಾಜಿ ಸಚಿವ ಸಂತೋಷ ಲಾಡ್ ಸಿದ್ದರಾಮಯ್ಯ ಅವರ ಆಪ್ತರಾಗಿದ್ದು, ಛಬ್ಬಿ ಡಿಕೆಶಿ ಬಣಕ್ಕೆ ಸೇರಿದವರಾಗಿದ್ದಾರೆ. ಸಿದ್ದು-ಡಿಕೆಶಿ ಬಣದಲ್ಲಿ ಗುರುತಿಸಿಕೊಂಡಿದ್ದ ಇಬ್ಬರಲ್ಲಿ ಲಾಡ್ ಟಿಕೆಟ್ ಗಿಟ್ಟಿಸಿಕೊಂಡಿದ್ದು, ನಾಗರಾಜ್ ಛಬ್ಬಿಗೆ ನುಂಗಲಾರದ ತುತ್ತಾಗಿದೆ.
ಈ ಬಾರಿ ಟಿಕೆಟ್ ಪಕ್ಕಾ ಎಂದು ಅರಿತಿದ್ದ ನಾಗರಾಜ್ ಛಬ್ಬಿ ಇಡೀ ಕ್ಷೇತ್ರ ಮನೆಗಳಿಗೆ ಕುಕ್ಕರ್ ಹಂಚುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಸಂತೋಷ ಲಾಡ್ ಅಕ್ಕಿ ವಿತರಿಸಿದ್ದರು. 2008ರಲ್ಲಿ ಸಂತೋಷ್ ಲಾಡ್ ಬಳ್ಳಾರಿಯಿಂದ ಕಲಘಟಗಿಗೆ ಬಂದಾಗ ನಾಗರಾಜ್ ಛಬ್ಬಿ ಕಲಘಟಗಿ ಕ್ಷೇತ್ರ ಬಿಟ್ಟು ಕೊಟ್ಡಿದ್ದಾಗ ಬಹಿರಂಗವಾಗಿ ಈ ಹಿಂದೆ ಹೇಳಿದ್ದರು.
ಛಬ್ಬಿ ನಡೆ ಕುತೂಹಲ: ಇದಕ್ಕೆ ಪ್ರತ್ಯುತ್ತರವಾಗಿ ಲಾಡ್ ನನಗೆ ಯಾರು ಕ್ಷೇತ್ರ. ತ್ಯಾಗ ಮಾಡಿಲ್ಲ. ನಾನು ಎಂಪಿ ಪ್ರಕಾಶ್ ಅವರ ಜೊತೆ ಜೆಡಿಎಸ್ ಬಿಟ್ಟು ಬಂದೆ. ಹೀಗಾಗಿ ನನಗೆ ಕಾಂಗ್ರೆಸ್ನಲ್ಲಿ ಜಾಗ ಸಿಕ್ಕಿತು. ಬಳಿಕ ಕ್ಷೇತ್ರ ಪುನರ್ವಿಂಗಡನೆಯಾಗಿ ಕಲಘಟಗಿಗೆ ಬಂದೆ. ನಮ್ಮ ಪಕ್ಷ ನಾಯಕರ, ಕಾರ್ಯಕರ್ತರ ಶ್ರಮ ಮತ್ತು ಜನರ ಆಶೀರ್ವಾದದಿಂದ ನಾನು ಚುನಾವಣೆಯಲ್ಲಿ ಗೆದ್ದಿದ್ದೇನೆ. ಅದು ಬಿಟ್ಟರೆ ನನಗಾಗಿ ಯಾರು ತ್ಯಾಗ ಮಾಡಿಲ್ಲ ಎಂದು ತಿರುಗೇಟು ನೀಡಿದ್ದರು. ಆದ್ರೆ ಈಗ ಕಾಂಗ್ರೆಸ್ ಹೈ ಕಮಾಂಡ್ ಲಾಡ್ ಕೈ ಹಿಡಿದಿದ್ದು, ಛಬ್ಬಿ ಕೈ ಬಿಟ್ಟಿದೆ. ಹೀಗಾಗಿ ಛಬ್ಬಿ ಅವರ ನಡೆ ಕುತೂಹಲ ಮೂಡಿಸಿದೆ.
ಇದನ್ನೂಓದಿ: ಅಭಿಮಾನಿಗಳಿಗೆ ಭಾವುಕ ಪತ್ರ ಬರೆದ ದತ್ತಾ; ಅವರು ಇಂಟರ್‌ನ್ಯಾಷನಲ್ ಪಕ್ಷ ಸೇರ ಹೊರಟವರೆಂದ ಹೆಚ್‌ಡಿಕೆ