ಹುಬ್ಬಳ್ಳಿ: ಅವಳಿ ನಗರಗಳನ್ನು ಅಭಿವೃದ್ಧಿ ಮಾಡುವ ಹಿನ್ನೆಲೆಯಲ್ಲಿ ಕೈಗೆತ್ತಿಕೊಂಡಿರುವ ಸ್ಮಾರ್ಟ್ ಸಿಟಿ ಯೋಜನೆಯಿಂದ ಜನರಿಗೆ ಅನುಕೂಲವಾಗಿದೆ ನಿಜ. ಆದರೆ, ಹು-ಧಾ ಮಹಾನಗರ ಪಾಲಿಕೆ ನೆಹರು ಮೈದಾನಕ್ಕೆ ಮಾತ್ರ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಲಕ್ಷ್ಯ ತೋರಲಾಗುತ್ತಿದೆ.
ಹುಬ್ಬಳ್ಳಿ ಆಟಗಾರರ ಹಾಗೂ ಸಾರ್ವಜನಿಕರ ಬಹುನಿರೀಕ್ಷಿತ ಸಿಂಥೆಟಿಕ್ ಮೈದಾನದ ಕನಸು ಈಗ ನನಸಾಗದಂತೆ ಉಳಿಯುತ್ತಿದೆ. ಸಿಂಥೆಟಿಕ್ ಮೈದಾನ ಮಾಡುವ ಬಗ್ಗೆ ಈ ಹಿಂದೆ ಚಿಂತನೆ ನಡೆಸಿದ್ದು, ಈಗ ಹೆಚ್ಚುವರಿ ಹಣವನ್ನು ಹಾಕಲಾಗದೇ ಸಿಂಥೆಟಿಕ್ ಮೈದಾನವಾಗಿ ಮಾರ್ಪಡಿಸುವ ಕನಸನ್ನು ಸ್ಮಾರ್ಟ್ ಸಿಟಿ ಇಲಾಖೆ ಕೈ ಬಿಟ್ಟಿದೆ. ಇದರಿಂದ ಬಹುದಿನಗಳ ಕನಸಿಗೆ ತಣ್ಣೀರು ಎರಚಿದಂತಾಗಿದೆ.
ಸುಮಾರು 21.44 ಕೋಟಿ ವೆಚ್ಚದಲ್ಲಿ ನೆಹರು ಮೈದಾನವನ್ನು ಅಭಿವೃದ್ಧಿ ಮಾಡಿ ಸಿಂಥೆಟಿಕ್ ಗ್ರೌಂಡ್ ಆಗಿ ಮಾರ್ಪಡಿಸುವ ಕುರಿತು ಚಿಂತನೆ ನಡೆಸಲಾಗಿತ್ತು. ಈಗ ಮತ್ತೆ 5 ಕೋಟಿ ಹೆಚ್ಚುವರಿ ಹಣ ಬೇಕಿರುವ ಹಿನ್ನೆಲೆಯಲ್ಲಿ ಸಿಂಥೆಟಿಕ್ ಮೈದಾನವನ್ನಾಗಿ ಮಾಡುವ ನಿರ್ಧಾರವನ್ನು ಕೈ ಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಉತ್ತರ ಕರ್ನಾಟಕದ ಪ್ರತಿಷ್ಠಿತ ಮೈದಾನದಲ್ಲಿ ಒಂದಾಗಿರುವ ನೆಹರು ಮೈದಾನದಲ್ಲಿ ಸಚಿನ ತೆಂಡೂಲ್ಕರ್, ಸುನೀಲ ಗವಾಸ್ಕರ್,ಅನಿಲ ಕುಂಬ್ಳೆ ಅಂತಹ ಮಹಾನ್ ಕ್ರಿಕೆಟ್ ದಿಗ್ಗಜರು ಆಡಿದ್ದಾರೆ. ಹೆಚ್ಚುವರಿ ಹಣ ಹಾಕದೇ ಸಿಂಥೆಟಿಕ್ ಗ್ರೌಂಡ್ ನಿರ್ಮಾಣ ಕೈಬಿಟ್ಟಿರುವುದು ವಿಪರ್ಯಾಸದ ಸಂಗತಿಯಾಗಿದೆ.