ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳು ಆಡಳಿತ ಮಾಡಿವೆ. ಮೂರು ಪಾರ್ಟಿಗಳಲ್ಲಿ ಭ್ರಷ್ಟರು, ಸುಳ್ಳುಗಾರರು ಇದ್ದಾರೆ. ಅವರೆಲ್ಲರೂ ತೊಲಗಬೇಕಿದೆ. ರಾಜ್ಯದಲ್ಲಿ ಸ್ವಚ್ಛ ಭ್ರಷ್ಟಾಚಾರ ಆಡಳಿತಕ್ಕಾಗಿ ಆಪ್ ಗೆಲ್ಲಬೇಕಿದೆ ಎಂದು ಆಪ್ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಜೆಡಿಎಸ್- ಬಿಜೆಪಿ- ಕಾಂಗ್ರೆಸ್ ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಕರಗತ ಮಾಡಿಕೊಂಡಿವೆ. ಒಂದು ಕಡೆ ಜೆಡಿಎಸ್ ಅನೈತಿಕವಾಗಿ ಅಧಿಕಾರ ಹಿಡಿಯುತ್ತಿದೆ. ಮತ್ತೊಂದು ಕಡೆ ಸರ್ವಾಧಿಕಾರಿ ಧೋರಣೆ, ಭ್ರಷ್ಟಾಚಾರ, ದುರಾಡಳಿತದ ಜೊತೆಗೆ ಅಘೋಷಿತ ತುರ್ತು ಪರಿಸ್ಥಿತಿಯನ್ನು ಬಿಜೆಪಿ ಹುಟ್ಟುಹಾಕಿದೆ ಎಂದು ಮುಖ್ಯಮಂತ್ರಿ ಚಂದ್ರು ಆರೋಪಿಸಿದರು.
ಇಷ್ಟು ವರ್ಷ ದೇಶದ ಆಳಿದ ಕಾಂಗ್ರೆಸ್ ಈಗ ಗ್ಯಾರಂಟಿ ಕಾರ್ಡ್ ಕೊಡುತ್ತಿದೆ. ಇದು ಸಹ ನಮ್ಮ ಯೋಜನೆಗಳ ಕಾಪಿ ಅಂತ ಅಪಾದಿಸಿದ ಚಂದ್ರು ಅವರು, ಚುನಾವಣೆ ದೃಷ್ಟಿಯಿಂದ ಬಿಜೆಪಿ ಒಳಮೀಸಲಾತಿ ಘೋಷಣೆ ಮಾಡಿರುವುದು ಖಂಡನೀಯ ಎಂದರು.
ರೈತರಿಗೆ ಸಮರ್ಪಕ ಬೆಂಬಲ ಬೆಲೆ ಸಿಗುತ್ತಿಲ್ಲ- ಮುಖ್ಯಮಂಂತ್ರಿ ಚಂದ್ರು: ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿದರೆ ಜನರಿಗೆ ಮೂಲಸೌಕರ್ಯಗಳನ್ನು, ರೈತರಿಗೆ ಡ್ಯಾಂಗಳನ್ನೂ, ರೈತರಿಗೆ ನೀರಾವರಿ ಒದಗಿಸಬಹುದು. ಆದರೆ ರೈತರ ಪರಿಸ್ಥಿತಿ ಇಂದು ಏನಾಗಿದೆ. ಸರ್ಕಾರ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಕೊಡುತ್ತಿಲ್ಲ. ರೈತರು ಬೆನ್ನೆಲುಬು ಎನ್ನುತ್ತೇವೆ ಅಷ್ಟೇ. ಆದ್ರೆ ಆಪ್ ಸರ್ಕಾರ ಇರುವ ಪಂಜಾಬದಲ್ಲಿ ಕಬ್ಬು ಬೆಳೆಗಾರರಿಗೆ ಬರೀ ಏಳೂವರಿ ಪರ್ಸೆಂಟ್ ಇಳುವರಿ ಇದ್ದರೂ, ಟನ್ಗೆ 3800 ರೂ. ಕೊಡುತ್ತಿದ್ದೇವೆ. ರಾಜ್ಯದಲ್ಲಿ ಕಬ್ಬು ಟನ್ಗೆ 2800 ಕೊಡುತ್ತಿದ್ದಾರೆ. ಕಟಾವ್ ಬೇರೆ, ಸಾಗಣೆ ವೆಚ್ಚ ಬೇರೆ, ಅವುಗಳನ್ನು ಸರಿಯಾಗಿ ರೈತರಿಗೆ ಬಿಲ್ ಕೊಡುತ್ತಿಲ್ಲ. ಇಲ್ಲಿ 12 ಪರ್ಸೆಂಟ್ ಇಳುವರಿ ಬಂದರೂ ರೈತರಿಗೆ ಲಾಭ ಸಿಗುತ್ತಿಲ್ಲ. ಕಾರಣವೇನೂ ಎಂಎಲ್ಎ, ಎಂಪಿಗಳ ಶುಗರ್ ಫ್ಯಾಕ್ಟರಿಗಳು ಇರುವುದು.
ಜನಗಣತಿ ಆಧಾರ ಮೇಲೆ ಮತ್ತು ಕಾಂತರಾಜ ಆಯೋಗದ ಆಧಾರದ ಮೇಲೆ ಮೀಸಲಾತಿ ನೀಡಬೇಕು. ಇದಕ್ಕೂ ಮೊದಲು ಜಯಪ್ರಕಾಶ ಹೆಗಡೆ ಅವರು ನೀಡಿದ ಮಧ್ಯಂತರ ವರದಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಶೂನ್ಯ ಭ್ರಷ್ಟಾಚಾರ ಗ್ಯಾರಂಟಿ: ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡುವುದೇ ಆಪ್ ಗುರಿ. ರಾಜ್ಯದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ, ಶೂನ್ಯ ಭ್ರಷ್ಟಾಚಾರ ಗ್ಯಾರಂಟಿ, ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ, ಪ್ರತಿ ಮನೆಗೆ 300ಯುನಿಟ್ 24/7 ಉಚಿತ ವಿದ್ಯುತ್, ಉಚಿತ ಉತ್ತಮ ಶಿಕ್ಷಣ, ಉಚಿತ ಬಸ್ ಸೌಲಭ್ಯ ಒದಗಿಸಲಾಗುವುದು ಎಂದು ಅವರು ಹೇಳಿದರು.
ಉಚಿತ ಉನ್ನತ ಶಿಕ್ಷಣ, ಮೊಹಲಾ ಕ್ಲಿನಿಕ್, ಯುವಕರಿಗೆ ನಿರುದ್ಯೋಗ ಭತ್ಯೆ, ಮಹಿಳೆಯರಿಗೆ ಗ್ಯಾರಂಟಿ ಉದ್ಯೋಗ ಮೀಸಲು, ಕೇಂದ್ರದ ವಿವಾದಿತ ಮೂರು ಕೃಷಿ ಕಾನೂನು ರದ್ದುಗೊಳಿಸುವುದು, ಬೆಂಬಲ ಬೆಲೆ, ಸಣ್ಣ ರೈತರಿಗೆ ಒಂದು ಬಾರಿ ಸಾಲ ಮನ್ನಾ, ಸರ್ಕಾರಿ ಉದ್ಯೋಗಕ್ಕೆ ಕನ್ನಡ ಕಡ್ಡಾಯ ಎಂಬ ಅಂಶಗಳನ್ನು ನಮ್ಮ ಪಕ್ಷದ ಪ್ರಣಾಳಿಕೆ ಹೊಂದಿದೆ ಎಂದು ಮುಖ್ಯಮಂತ್ರಿ ಚಂದ್ರು ವಿವರಿಸಿದರು.
ಇದನ್ನೂಓದಿ:ಜೆಡಿಎಸ್ ಮಾಜಿ ಶಾಸಕ ಗುಬ್ಬಿ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ