ಹುಬ್ಬಳ್ಳಿ : ಹಣ ಡಬಲ್ ಮಾಡುವುದಾಗಿ ನಂಬಿಸಿ ಶಿಕ್ಷಕರೊಬ್ಬರನ್ನು ನಂಬಿಸಿ ವಂಚಿಸಲಾಗಿದ್ದು, 80 ಲಕ್ಷ ರೂ. ಕಳೆದುಕೊಂಡಿರುವ ಶಿಕ್ಷಕ ಡೆತ್ನೋಟ್ ಬರೆದಿಟ್ಟು ಕಾಣೆಯಾಗಿದ್ದಾರೆ ಎನ್ನಲಾಗಿದೆ.
ಕಲಘಟಗಿಯ ಸುರಭಿ ಟ್ರೇಡರ್ಸ್ ನ ಮಾಲೀಕ ಫಹೀದ್ ನಚ್ಚಿಕದನ ಹಾಗೂ ಇಲಿಯಾಸ್ ನಚ್ಚಿಕದನ ಎಂಬುವವರು ಶಿಕ್ಷಕರಾದ ದ್ಯಾಮಣ್ಣ ಮೇಟಿಯವರಿಗೆ ಹಣ ದ್ವಿಗುಣಗೊಳಿಸುವ ಆಮಿಷವನ್ನು ಒಡ್ಡಿ ಸುಮಾರು 80.78 ಲಕ್ಷ ರೂ. ಮೋಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮನನೊಂದ ಪತಿ ಡೆತ್ ನೋಟ್ ಬರೆದಿಟ್ಟು ಕಳೆದ ಮೂರು ತಿಂಗಳಿನಿಂದ ಕಾಣೆಯಾಗಿದ್ದಾರೆ ಎಂದು ಪತ್ನಿ ಶಿಕ್ಷಕಿ ಲಕ್ಷ್ಮಿ ಮೇಟಿ ಆರೋಪಿಸಿದ್ದಾರೆ.
ನಗರದಲ್ಲಿಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತಾಗಿ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಸಾಕಷ್ಟು ಬಾರಿ ಎಸ್.ಪಿ ಯವರನ್ನು ಭೇಟಿ ಮಾಡಿ ಕಷ್ಟ ಹೇಳಿಕೊಂಡರು ಕ್ರಮಕ್ಕೆ ಮುಂದಾಗಿಲ್ಲ, ಅಲ್ಲದೆ ಪತಿಯೊಂದಿಗೆ ಬಂಡವಾಳ ಹೂಡಿದವರೂ ಸಹ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದಾರೆ. ಗಂಡನ ವಿರುದ್ಧವೇ ಹಲವಾರು ಸುಳ್ಳು ಆಪಾದನೆ ಮಾಡಿದ್ದಾರೆ.
ಎನ್.ಬಿ.ಡಬ್ಲೂ. ನೆಪ ಮಾಡಿಕೊಂಡು ಮಸ್ಕಿ ಪೋಲೀಸ್ ಠಾಣೆಯಲ್ಲಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆ. ಇದರಿಂದ ಖಿನ್ನತೆಗೊಳಗಾಗಿ ಸುಮಾರು ಒಂದು ತಿಂಗಳು ಶಾಲೆಗೆ ಹೋಗದೆ ಮನೆಯಲ್ಲಿದ್ದು ಮಾನಸಿಕವಾಗಿ ಕುಗ್ಗಿದ್ದರು. ಕಳೆದ ಮೂರು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದು ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ನಮಗೆ ಅನ್ಯಾಯವಾಗಿದೆ ನ್ಯಾಯ ನೀಡಿ ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ದ್ಯಾಮಣ್ಣ ಅವರ ತಂದೆ ತಿಪ್ಪಣ್ಣ ಮೇಟಿ ಇದ್ದರು.