ಧಾರವಾಡ: ಹಿರಿಯ ಸಾಹಿತಿ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಉಮಾದೇವಿ ಅವರು ಹಂತಕನನ್ನು ಗುರುತು ಹಿಡಿದಿದ್ದಾರೆ ಎನ್ನಲಾಗಿದೆ.
ಬುಧವಾರ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ನಡೆದ ಹತ್ತು ಜನ ಶಂಕಿತ ಹಂತಕರ ಪರೇಡ್ನಲ್ಲಿ ಹಂತಕನ ಗುರುತು ಪತ್ತೆ ಮಾಡಿದ್ದಾರೆ. 2015 ಆ.30 ರಂದು ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಹತ್ಯೆ ನಡೆದಿತ್ತು. ಬೈಕ್ ಮೇಲೆ ಬಂದ ಹಂತಕರು ಎಂ.ಎಂ.ಕಲ್ಬುರ್ಗಿ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು.
ಹಂತಕರನ್ನ ಪತ್ತೆ ಮಾಡಿ ಬಂಧಿಸಿದ್ದ ಸಿಐಡಿ ಅಧಿಕಾರಿಗಳು ಕಳೆದ ಕೆಲ ತಿಂಗಳುಗಳ ಹಿಂದೆ ಶಂಕಿತ ಹಂತಕರನ್ನು ಕರೆ ತಂದು ಸ್ಥಳ ಮಹಜರು ನಡೆಸಿದ್ದರು. ಹತ್ತು ಜನ ಶಂಕಿತರಲ್ಲಿ ಒಬ್ಬ ವ್ಯಕ್ತಿ ಕಲಬುರ್ಗಿ ಹಂತಕ ಎಂದು ಪತ್ನಿ ಉಮಾದೇವಿ ಗುರುತು ಹಚ್ಚಿದ್ದಾರೆ.
ಸದ್ಯ ಅವರು ಒಬ್ಬನನ್ನು ಪತ್ತೆ ಹಚ್ಚಿದ್ದು, ಕಲಬುರ್ಗಿ ಅವರ ಹತ್ಯೆ ಮುಂದಿನ ಆ.30ಕ್ಕೆ ನಾಲ್ಕು ವರ್ಷ ಪೂರೈಸಲಿದೆ. ಕೊನೆಗೂ ಹಂತಕನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿ ಇಟ್ಟಿದ್ದಾರೆ. ಆದರೆ ಸಿಐಡಿ ಅಧಿಕಾರಿಗಳು ಹಂತಕನ ಹೆಸರು ಬಹಿರಂಗ ಪಡಿಸಿಲ್ಲ ಎನ್ನಲಾಗಿದೆ.