ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಸ್ಥಾನ ಹೈಕಮಾಂಡ್ ಅಂಗಳದಲ್ಲಿದೆ. ಅಧ್ಯಕ್ಷೆ ಸೋನಿಯಾ ಗಾಂಧಿ ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್. ಆರ್. ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮೂಲ ಕಾಂಗ್ರೆಸ್ ಹಾಗೂ ವಲಸೆ ಕಾಂಗ್ರೆಸ್ ಅಂತೇನು ಇಲ್ಲಾ. ಕಾಂಗ್ರೆಸ್ ಪಕ್ಷಕ್ಕೆ ಬಂದ ಮೇಲೆ ಎಲ್ಲರೂ ಕಾಂಗ್ರೆಸಿಗರೇ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತಾಗಿ ಪಕ್ಷದ ಎಲ್ಲಾ ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಸದ್ಯದಲ್ಲಿಯೇ ಯಾರು ಕೆಪಿಸಿಸಿ ಅಧ್ಯಕ್ಷರು ಆಗಬೇಕು ಎನ್ನೋದು ನಿರ್ಧಾರವಾಗುತ್ತದೆ ಎಂದರು. ಪಕ್ಷ ಅಂದ್ಮೇಲೆ ಎಲ್ಲರಿಗೂ ತಮ್ಮ ಅಭಿಪ್ರಾಯವನ್ನು ಹೇಳುವ ಹಕ್ಕಿದೆ. ಎಲ್ಲರೂ ಒಂದೊಂದು ರೀತಿ ಹೇಳುತ್ತಾರೆ. ಆದ್ದರಿಂದ ಸೋನಿಯಾ ಗಾಂಧಿಯವರು ಬೇಗ ನಿರ್ಣಯ ಕೈಗೊಳ್ಳುತ್ತಾರೆ ಹೇಳಿದರು.
ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲ
ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆ ಕುರಿತು ಮಾತನಾಡಿ, ಇಂದು ಆಗುತ್ತೆ, ನಾಳೆ ಆಗುತ್ತೆ ಎಂದು ಕಾಲಹರಣ ಮಾಡುತ್ತಿದ್ದಾರೆ. ಅನರ್ಹರು ಶಾಸಕರಾದರು ಜನರ ನಿರ್ಣಯವನ್ನು ನಾವು ಸ್ವಾಗತ ಮಾಡುತ್ತವೆ. ಎಲ್ಲಾ ಖಾತೆಗಳನ್ನು ಸಿಎಂ ಅವರೇ ಇಟ್ಟುಕೊಂಡ್ರೇ ಹೇಗೆ..? ಹೀಗಿದ್ರೇ ರಾಜ್ಯ ಅಭಿವೃದ್ಧಿಯಾಗುವುದು ಹೇಗೆ ಎಂದು ಪ್ರಶ್ನಿಸಿದರು.
ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ. ಆದರೆ ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲ. ಸಿಎಂ ಬಿಎಸ್ವೈ ದೆಹಲಿಗೆ ಬರುತ್ತೇನೆ ಅಂದರೆ ಬರಬೇಡಿ ಅಂತಾರೆ. ಮುಂದಿನ ತಿಂಗಳು 17ರಂದು ಅಧಿವೇಶನವಿದೆ. ಬೇಗನೆ ಸಂಪುಟ ವಿಸ್ತರಣೆ ಮಾಡಿ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಮಾಡಬೇಕು ಎಂದರು. ಇನ್ನು ಮಹದಾಯಿ ನೀರು ಹಂಚಿಕೆ ವಿಚಾರದಲ್ಲಿ ವಿಳಂಬವಾಗುತ್ತಿದ್ದು, ಅತಿವೃಷ್ಠಿಯಿಂದ ಉತ್ತರ ಕರ್ನಾಟಕ ತತ್ತರಿಸಿದೆ. ಪರಿಹಾರ ಹಣ ಸರಿಯಾಗಿ ನೀಡಿಲ್ಲ, ಇವರ ಕೈಲಿ ಏನಾಗುತ್ತೆ ಎಂದು ಕಿಡಿ ಕಾರಿದರು.