ಹುಬ್ಬಳ್ಳಿ: ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ಪಕ್ಷದ ಹುರಿಯಾಳುಗಳನ್ನು ಕಣಕ್ಕೆ ಇಳಿಸಲು ಸಜ್ಜಾಗುತ್ತಿವೆ. ಅದರ ನಡುವೇ ಶಕ್ತಿ ಪ್ರದರ್ಶನ ರಾಜಕೀಯ ಚುರುಕುಗೊಂಡಿದೆ. ಕಾಂಗ್ರೆಸ್ ಭದ್ರಕೋಟೆಯಾಗಿರುವ ಕುಂದಗೋಳ ಕ್ಷೇತ್ರ ಬಿಜೆಪಿ ವಶಪಡಿಸಿಕೊಳ್ಳಲು ತಯಾರಿ ನಡೆಸಿದೆ. ಅಲ್ಲದೇ ಅದಕ್ಕಾಗಿ ಎಲ್ಲ ರೀತಿಯ ಪ್ಲ್ಯಾನ್ ಕೂಡ ಮಾಡುತ್ತಿದೆ. ಹೀಗಿರುವಾಗಲೇ ಅವರದ್ದೇ ಸ್ವಪಕ್ಷದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪಕ್ಷಕ್ಕೆ ಬಂಡಾಯದ ಭೀತಿ ಎದುರಾಗಿದೆ.
ಕುಂದಗೋಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು 2013 ರಿಂದ ಇಲ್ಲಿಯವರೆಗೆ ಕಾಂಗ್ರೆಸ್ ಈ ಕ್ಷೇತ್ರವನ್ನ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. 2013 ಮತ್ತು 2018ರ ವಿಧಾನಸಭಾ ಚುನಾವಣೆಯಲ್ಲಿ ಸಿ.ಎಸ್. ಶಿವಳ್ಳಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದರು. 2019ರಲ್ಲಿ ಸಿ.ಎಸ್. ಶಿವಳ್ಳಿ ಅವರ ಅಕಾಲಿಕ ಮರಣದ ನಂತರ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಯಿತು. ಉಪಚುನಾವಣೆಯಲ್ಲಿ ಸಿ.ಎಸ್. ಶಿವಳ್ಳಿ ಪತ್ನಿ ಕುಸುಮಾವತಿ ಶಿವಳ್ಳಿ ಶಾಸಕಿಯಾಗಿ ಆಯ್ಕೆಯಾದ್ರು. ಹೀಗಾಗಿ ಈ ಕ್ಷೇತ್ರವನ್ನ ಹೇಗಾದ್ರೂ ಮಾಡಿ ಈ ಬಾರಿಗೆ ತಮ್ಮ ವಶಕ್ಕೆ ತೆಗೆದುಕೊಳ್ಳಬೇಕು, ಕಾಂಗ್ರೆಸ್ ಪಕ್ಷವನ್ನ ಕಟ್ಟಿ ಹಾಕಬೇಕೆಂದು ಬಿಜೆಪಿ ರಣತಂತ್ರ ಹೆಣೆಯುತ್ತಿದೆ.
ಅಮಿತ್ ಶಾ ಕರೆತಂದು ರೋಡ್ ಶೋ: ಅದೇ ಕಾರಣದಿಂದ ಬಿಜೆಪಿ ನಾಯಕರು ಕಳೆದ ಜನವರಿ 28 ರಂದು ಬಿಜೆಪಿಯ ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಕರೆತಂದು ಬೃಹತ್ ರೋಡ್ ಶೋ ನಡೆಸಿದ್ದರು. ರೋಡ್ ಶೋ ಕಾರ್ಯಕ್ರಮದಲ್ಲಿಯೇ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರನ್ನ ಕಡೆಗಣನೆ ಮಾಡಿದ್ದರು. ಇದರಿಂದ ಮುನಿಸಿಕೊಂಡಿರುವ ಎಸ್ ಐ ಚಿಕ್ಕನಗೌಡರ ತಮ್ಮ ಹುಟ್ಟುಹಬ್ಬದ ನೆಪದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಜನ್ಮದಿನ ಆಚರಿಸುವ ಮೂಲಕ ಹೈಕಮಾಂಡ್ಗೆ ಖಡಕ್ ಸಂದೇಶವನ್ನು ಚಿಕ್ಕನಗೌಡರ ರವಾನೆ ಮಾಡಿದ್ದಾರೆ.
ಶಾಸಕ ಎಸ್.ಐ. ಚಿಕ್ಕನಗೌಡರ ಹೇಳಿಕೆ: ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದು ನಾನು. ಕಳೆದ ಮೂರು ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತಿದ್ದೇನೆ. ನಾನು ಸಹ ಟಿಕೆಟ್ ಆಕಾಂಕ್ಷಿ. ನಮ್ಮ ಪಕ್ಷದ ನಾಯಕರು ಟಿಕೆಟ್ ನನಗೆ ಕೊಡುತ್ತಾರೆಂಬ ನಂಬಿಕೆಯಲ್ಲಿ ನಾನಿದ್ದೇನೆ. ಒಂದು ವೇಳೆ ಟಿಕೆಟ್ ಕೈತಪ್ಪಿದ್ದೆ ಆದಲ್ಲಿ ನಮ್ಮ ಬೆಂಬಲಿಗರ ಜೊತೆಗೆ ಚರ್ಚೆ ಮಾಡುತ್ತೇನೆ. ನಮ್ಮ ಕಾರ್ಯಕರ್ತರು ಮತ್ತು ಬೆಂಬಲಿಗರು ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆಯೋ ಅದಕ್ಕೆ ನಾನು ಸಿದ್ಧನಿದ್ದೇನೆ. ಅವರು ಪೂರ್ವ ಅಂದ್ರೆ ಪೂರ್ವ, ಪಶ್ಚಿಮ ಅಂದ್ರೆ ಪಶ್ಚಿಮ ಎನ್ನುವ ಹೇಳಿಕೆ ಮುಖಾಂತರ ಬಂಡಾಯ ಬಾವುಟ ಹಾರಿಸುವ ಮುನ್ಸೂಚನೆಯನ್ನ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ ನೀಡಿದ್ದಾರೆ.
ಇಬ್ಬರು ಟಿಕೆಟ್ ಆಕಾಂಕ್ಷಿಗಳ ನಡುವೆ ಪೈಪೋಟಿ: ಇನ್ನು, ಬಿಜೆಪಿಯ ಟಿಕೆಟ್‌ಗಾಗಿ ಇಬ್ಬರ ನಡುವೆ ಫೈಟ್ ನಡೆದಿದೆ. ಎಸ್ ಐ ಚಿಕ್ಕನಗೌಡರ ಯಡಿಯೂರಪ್ಪನವರ ಸಂಬಂಧಿ ಆದ್ರೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಆಪ್ತ ಎಮ್.ಆರ್. ಪಾಟೀಲ್ ನಡುವೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಎದುರಾಗಿದೆ. ಎಮ್.ಆರ್. ಪಾಟೀಲ್ ಪರವಾಗಿ ಬಹಿರಂರವಾಗಿಯೇ ಜೋಶಿ ಬ್ಯಾಟಿಂಗ್ ಮಾಡುತ್ತಿರುವುದು ಯಾರಿಗೆ ಟಿಕೆಟ್ ಎಂಬ ಕುತೂಹಲ ಮೂಡಿದೆ. ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ. ಬಿಜೆಪಿ ಇಬ್ಬರು ನಾಯಕರು ಕ್ಷೇತ್ರ ಸಂಚಾರ ನಡೆಸಿದ್ದಾರೆ. ಟಿಕೆಟ್ ತಪ್ಪಿದ್ದೇ ಆದ್ರೆ ಒಬ್ಬರಂತು ಬಂಡಾಯ ಬಾವುಟ ಹಾರಿಸುವ ಮುನ್ಸೂಚನೆ ನೀಡಿದ್ದು, ಟಿಕೆಟ್ ಹಂಚಿಕೆ ಕಮಲ ನಾಯಕರಿಗೆ ಕಬ್ಬಿಣದ ಕಡಲೆಯಾಗಿದೆ.
ಇದನ್ನೂ ಓದಿ: ಬಿಜೆಪಿಯದ್ದು ವಿಜಯ ಸಂಕಲ್ಪ ಯಾತ್ರೆಯಲ್ಲ, ಕ್ಷಮಾಪಣಾ ಯಾತ್ರೆ: ರಣದೀಪ್ ಸುರ್ಜೇವಾಲಾ