ಹುಬ್ಬಳ್ಳಿ : ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಶಹರ್ ಠಾಣೆ ಇನ್ಸ್ಪೆಕ್ಟರ್ ಮಹ್ಮದ್ ರಫೀಕ್ ಅವರನ್ನು ಅಮಾನತು ಮಾಡುವ ಪ್ರಶ್ನೆಯೇ ಇಲ್ಲ. ಅವರು ಕಾನೂನಾತ್ಮಕವಾಗಿ ಕೆಲಸ ಮಾಡಿದ್ದಾರೆ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ವಿಷಯವನ್ನು ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಬಳಕೆ ಮಾಡುತ್ತಿದೆ. ಇದನ್ನು ಬೇರೆ ರೀತಿಯಲ್ಲಿ ಬಿಂಬಿಸುವ ಕೆಲಸ ಮಾಡಲಾಗುತ್ತಿದೆ. ಹೈಕೋರ್ಟ್ ಆದೇಶದ ಮೇರೆಗೆ ಪೊಲೀಸರು ದೀರ್ಘಾವಧಿಯಿಂದ ಬಾಕಿ ಇರುವ ಪ್ರಕರಣಗಳನ್ನು ವಿಲೇವಾರಿ ಮಾಡುವ ಕೆಲಸ ಮಾಡಿದ್ದಾರೆ. ಹೀಗಾಗಿ ಯಾವ ಕಾರಣಕ್ಕೂ ಶಹರ್ ಠಾಣೆ ಇನ್ಸ್ಪೆಕ್ಟರ್ ಮಹ್ಮದ್ ರಫೀಕ್ ಅವರನ್ನು ಅಮಾನತು ಮಾಡಲ್ಲ ಎಂದರು.
ಅವರೊಬ್ಬ ಖಡಕ್ ಅಧಿಕಾರಿಯಾಗಿದ್ದು, ರೌಡಿಸಂ ವಿರುದ್ಧ ತಮ್ಮ ದಕ್ಷತೆಯನ್ನು ತೋರಿಸಿದ್ದರು. ಅವರೊಬ್ಬ ಜಾತ್ಯತೀತ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಪೊಲೀಸ್ ಠಾಣೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ತಮ್ಮ ಧಾರ್ಮಿಕ ಮನೋಭಾವ ಏನೆಂಬುದನ್ನು ತೋರಿಸಿದ್ದರು. ಇದನ್ನು ನೋಡಿಯಾದರೂ ಬಿಜೆಪಿಯವರಿಗೆ ನಾಚಿಕೆ ಆಗಬೇಕು ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಕಿಡಿಕಾರಿದರು.
ಇದೀಗ ಇನ್ಸ್ಪೆಕ್ಟರ್ ವಿರುದ್ಧ ಬಿಜೆಪಿಯವರು ಸುಖಾ ಸುಮ್ಮನೆ ಮುಗಿ ಬೀಳುತ್ತಿದ್ದಾರೆ. ಅವರನ್ನು ಯಾವುದೇ ಕಡ್ಡಾಯ ರಜೆಯ ಮೇಲೆ ಕಳುಹಿಸಿಲ್ಲ. ಅವರು ತಮ್ಮ ವೈಯಕ್ತಿಕ ಕಾರಣಕ್ಕೆ ರಜೆ ತೆಗೆದುಕೊಂಡಿದ್ದಾರೆ. ಸರ್ಕಾರ ಯಾವುದೇ ರೀತಿಯ ರಜೆ ಕೊಟ್ಟಿಲ್ಲ, ನಿರ್ದೇಶನವನ್ನೂ ನೀಡಿಲ್ಲ ಎಂದು ಇನ್ಸ್ಪೆಕ್ಟರ್ಗೆ ಕಡ್ಡಾಯ ರಜೆ ನೀಡಲಾಗಿದೆ ಎಂಬ ವಿಚಾರಕ್ಕೆ ಶಾಸಕರು ಸ್ಪಷ್ಟನೆ ನೀಡಿದರು.
ಆರೋಪಿ ವಿರುದ್ಧ ಸುಮಾರು 16 ಪ್ರಕರಣಗಳಿವೆ. ಅಂತವರ ಪರವಾಗಿ ಬಿಜೆಪಿ ನಿಂತು ಹೋರಾಟ ಮಾಡುವುದು ಎಷ್ಟರಮಟ್ಟಿಗೆ ಸರಿ. ಇದರಿಂದ ಬಿಜೆಪಿ ತತ್ವ ಸಿದ್ಧಾಂತ ಏನೆಂಬುದು ಗೊತ್ತಾಗುತ್ತದೆ. ರೌಡಿಶೀಟರ್ಗಳು ತಮ್ಮ ಪಕ್ಷದ ಪಿಲ್ಲರ್ಗಳೆಂದು ಬಿಜೆಪಿಯವರು ಒಪ್ಪಿಕೊಳ್ಳಲಿ. ಆಗ ನಾವು ಅವರ ಹೋರಾಟವನ್ನು ಒಪ್ಪಿಕೊಳ್ಳುತ್ತೇವೆ ಎಂದರು.
ಇದೀಗ ಇನ್ಸ್ಪೆಕ್ಟರ್ ಅಮಾನತು ಕುರಿತು ಬಿಜೆಪಿಯ ಗೊಡ್ಡು ಬೆದರಿಕೆಗೆ ಸರ್ಕಾರ ಹೆದರುವ ಪ್ರಶ್ನೆಯಿಲ್ಲ. ಹೀಗೆಯೇ ಮುಂದುವರೆದರೇ ನಾವು ಸಹ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಬಿಜೆಪಿಯ ಕುತಂತ್ರವನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ತಿಳಿಸಿದರು.
ಬಿಜೆಪಿ ನಡೆಸಿದ ಪ್ರತಿಭಟನೆಯಿಂದ ತಪ್ಪಿಸಿಕೊಳ್ಳಲು ಪೊಲೀಸ್ ಇಲಾಖೆ ಇನ್ಸಪೆಕ್ಟರ್ ಮಹ್ಮದ ರಫೀಕ್ ತಹಶೀಲ್ದಾರ್ ಅವರನ್ನು ಕಡ್ಡಾಯ ರಜೆಗೆ ಕಳಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದ್ರೆ ಬಲ್ಲ ಮೂಲಗಳ ಪ್ರಕಾರ ಇನ್ಸ್ ಪೆಕ್ಟರ್ ಮೂರು ದಿನ ರಜೆ ತಗೆದುಕೊಂಡಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಹಾಗೂ ಗೊಂದಲ ಸೃಷ್ಟಿಯಾಗಬಾರದು ಎಂಬ ದೃಷ್ಠಿಯಿಂದ ಅವರ ಸ್ಥಳಕ್ಕೆ ಇನ್ಸೆಕ್ಟರ್ ಬಿ ಎ ಜಾಧವ್ ಅವರನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳಿಂದಲೂ ತಿಳಿದು ಬಂದಿದೆ.
ಹುಬ್ಬಳ್ಳಿಯಲ್ಲಿ ಹಿಂದೂ ಕಾರ್ಯಕರ್ತನ ಬಂಧನಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಶ್ರೀಕಾಂತ್ ಪೂಜಾರಿಗೆ ನ್ಯಾಯ ಸಿಗುವವರೆಗೆ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದರು.
ಇದನ್ನೂ ಓದಿ : ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ಮಾತ್ರ ರಾಜಕಾರಣ ಮಾಡುತ್ತಿದೆ: ಬಸವರಾಜ ಬೊಮ್ಮಾಯಿ